ಯಮಕನಮರಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿಗೆ ಹೆಡೆಮುರಿ ಕಟ್ಟುವಲ್ಲಿ ಯಮಕನಮರಡಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು ಯಮಕನಮರಡಿಯಲ್ಲಿ ಡಿ.16ರಂದು ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಪ್ರಚಾರ ಮಾಡಿ ಗ್ರಾಮದ ಬಸದಿಯ ಕಟ್ಟೆಯ ಮೇಲೆ ಕುಳಿತಿದ್ದ ಭರಮಾ ಭೂಪಾಲ್ ದೂಪದಾಳಿ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಮುಖಕ್ಕೆ ಮಂಕಿ ಕ್ಯಾಪ್, ಮಾಸ್ಕ್ ಹಾಕಿಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಯೊರ್ವ ಪಿಸ್ತೂಲಿನಿಂದ ಗುಂಡು ಹಾರಿಸಿದ್ದ ಘಟನೆ ಇಡೀ ಜಿಲ್ಲೆಯನ್ನೆ ಬೆಚ್ಚಿ ಬೀಳಿಸಿತ್ತು.
ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಬಲೆ ಬೀಸಿದ್ದ ಯಮಕನಮರಡಿ ಠಾಣೆ ಪೊಲೀಸರು ಆರೋಪಿ ಅದೇ ಗ್ರಾಮದ ಗಣಪತಿ ಗಲ್ಲಿಯ ವಿನಾಯಕ ಸೋಮಶೇಖರ್ ಹೊರಕೇರಿಯನ್ನು ಶುಕ್ರವಾರ ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಆರೋಪಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಗುಂಡಿನ ದಾಳಿಯ ಅಸಲಿ ಕಹಾನಿಯನ್ನು ಬಿಚ್ಚಿಟ್ಟಿದ್ದಾನೆ.
ಆರೋಪಿ ಭಾಗ್ಯಶ್ರೀ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನಂತೆ, ಇನ್ನು ಹುಡುಗಿಯ ದೂರದ ಸಂಬಂಧಿಕನಾಗಿದ್ದ ಭರಮಾ ದೂಪದಾಳಿ ಬೇರೆ ಕಡೆಗೆ ಎಂಗೇಜಮೆಂಟ್ ಮಾಡಿ ಕೊಟ್ಟಿದ್ದನು. ಇದರಿಂದ ರೊಚ್ಚಿಗೆದ್ದಿದ್ದ ಆರೋಪಿ ವಿನಾಯಕ ನನ್ನ ಪ್ರೀತಿಗೆ ಅಡ್ಡ ಬಂದಿದ್ದಾನೆ ಎಂದು ಭರಮಾ ದೂಪದಾಳಿಯನ್ನು ಕೊಲೆ ಮಾಡಲು ಗುಂಡಿನ ದಾಳಿ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಯಮಕನಮರಡಿ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.