ಸಿಎಂ ವಿರುದ್ಧ ಸಿಡಿ ಬ್ಲಾಕ್ ಮೇಲ್ ಆರೋಪಗಳು ಕೇಳಿ ಬಂದಿವೆ. ಒಂದು ವೇಳೆ ಅದು ಸುಳ್ಳಾಗಿದ್ದರೆ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕು. ಎಲ್ಲರಿಗೂ ಹಾಗೆ ಬ್ಲಾಕ್ ಮೇಲ್ ಮಾಡೋಕೆ ಆಗಲ್ಲ ಎಂದು ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಗುರುವಾರ ಮಾತನಾಡಿ, ಸಂಪುಟ ವಿಸ್ತರಣೆ ನಂತರ ಸಿಎಂ ವಿರುದ್ಧ ಸಿಡಿ ಬ್ಲಾಕ್ ಮೇಲ್ ಆರೋಪಗಳು ಕೇಳಿ ಬಂದಿವೆ. ಎಲ್ಲರಿಗೂ ಹಾಗೆ ಬ್ಲಾಕ್ ಮೇಲ್ ಮಾಡೋಕೆ ಆಗಲ್ಲ. ಒಂದು ವೇಳೆ ಅದು ಸುಳ್ಳಾಗಿದ್ದರೆ ಕ್ರಿಮಿನಲ್ ಕೇಸ್ ದಾಖಲು ಮಾಡಬೇಕು. ದುರ್ಬಲ ಮುಖ್ಯಮಂತ್ರಿಗೆ ಮಾತ್ರ ಬ್ಲಾಕ್ ಮೇಲ್ ಮಾಡ್ತಾರೆ. ಆರೋಪ ಮಾಡುವವರು ಸ್ವಪಕ್ಷದವರೇ ಆಗಿರಲಿ, ಬೇರೆ ಪಕ್ಷದವರೇ ಆಗಲಿ, ಬ್ಲಾಕ್ ಮೇಲ್ ಮಾಡುವವರ ಮೇಲೆ ಕ್ರಿಮಿನಲ್ ಕೇಸ್ ಹಾಕಲಿ. ಸತ್ಯ ಹೊರಬರಲಿ ಎಂದು ಸವಾಲು ಹಾಕಿದರು. ಸಿಡಿ ವಿಚಾರ ಬಗ್ಗೆ ಆ ಪಕ್ಷದವರೆ ಆರೋಪ ಮಾಡಿದ್ದಾರೆ. ನಾವೇನು ಆರೋಪ ಮಾಡ್ತಿಲ್ಲ, ಅದರಲ್ಲಿ ಸತ್ಯ ಇದೆ ಅಲ್ವಾ. ನಾವು ಮಾಡಿದರೆ ವಿರೋಧ ಪಕ್ಷದವರು ಅಂತಾರೆ. ಈಗ ಅವರೇ ಮಾಡಿದ್ದಾರೆ. ಏನಂತೆ, ಕ್ರಿಮಿನಲ್ ಕೇಸ್ ಹಾಕಿ ಎಂದರು.
ಮುಖ್ಯಮಂತ್ರಿಗಳು ಬ್ಲಾಕ್ ಮೇಲ್ ಗೆ ಒಳಗಾಗಿದ್ದಾರೋ ಅಥವಾ ಒತ್ತಡಕ್ಕೆ ಒಳಗಾಗಿದ್ದಾರೋ ಅನ್ನೋದು ನಂಗೆ ಗೊತ್ತಿಲ್ಲ. ಅದಕ್ಕೆಲ್ಲ ತನಿಖೆ ಮಾಡಿ ಅಂತ ಹೇಳಲ್ಲ, ಕ್ರಿಮಿನಲ್ ಕೇಸ್ ಕೊಡಲಿ ಅನ್ನುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿನಲ್ಲಿ ಕುಟುಂಬ ರಾಜಕಾರಣ ಇದೆ ಎಂದು ಬಹಳ ಹಿಂದೆಯೇ ನಾನು ಹೇಳಿದ್ದೇನೆ. ಬಿಡಿಎ ಹಗರಣದಲ್ಲಿ 7 ಕೋಟಿ 40 ಲಕ್ಷ ಹಣ ಅವರ ಕುಟುಂಬದವರ ಖಾತೆಗೆ ಹೋಗಿದೆ, ಅದರ ಅರ್ಥ ಕುಟುಂಬ ರಾಜಕಾರಣ ಇದೆ ಅಂತ ಅಲ್ವಾ? ಈ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಜನರೇ ಉತ್ತರ ಕೊಡುತ್ತಾರೆ. ನನ್ನ ಕಾಲದಲ್ಲಿ ಜಾರಿಗೆ ತಂದಿದ್ದ ಎಲ್ಲ ಜನಪರ ಕೆಲಸಗಳನ್ನು ನಿಲ್ಲಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.
ನಾಯಕತ್ವ ಬದಲಾವಣೆಗೆ ದಿನಾಂಕ ನಿಗದಿ ಮಾಡಲಿ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಸರಿಯಪ್ಪ, ನಾಯಕತ್ವ ಬದಲಾವಣೆ ವಾತಾವರಣ ಇರಲಿಲ್ಲ ಅಂತಾದರೆ ಇಷ್ಟು ದಿನಗಳ ಕಾಲ ಮಂತ್ರಿಮಂಡಲ ವಿಸ್ತರಣೆ ಯಾಕೆ ಮಾಡಿರಲಿಲ್ಲ? ಮಂತ್ರಿಮಂಡಲ ವಿಸ್ತರಣೆಗೆ ಯಾಕೆ ತಡವಾಯ್ತು? ಗೋಗರೆದು ಕೈಕಾಲು ಕಟ್ಟಿ ಮಂತ್ರಿಮಂಡಲ ವಿಸ್ತರಣೆ ಮಾಡಿಸಿಕೊಂಡಿದ್ದಾರಲ್ಲ, ಇದಕ್ಕೆಲ್ಲ ಏನ್ ಹೇಳ್ತಿರಿ? ಎಂದು ಮರು ಪ್ರಶ್ನಿಸಿದರು.
ಒಬ್ಬ ಸಚಿವನನ್ನು ಸಂಪುಟದಿಂದ ಬಿಟ್ಟಿದ್ದಾರೆ, ಯಾವ ಕಾರಣಕ್ಕೆ ಬಿಟ್ಟಿದ್ದಾರೆ ಎಂದು ಕಾರಣ ಕೊಟ್ಟಿಲ್ಲ. ಪಕ್ಷೇತರನಾಗಿ ಕಾಂಗ್ರೆಸ್ ಪಕ್ಷದ ಸಹಾಯದೊಂದಿಗೆ ಗೆದ್ದಿದ್ದ ಪಕ್ಷೇತರ ಶಾಸಕ ಎಚ್.ನಾಗೇಶ್ ಅವರನ್ನು ಯಾಕೆ ಕೈಬಿಟ್ಟಿದ್ದಾರೆ? ಈಗ ಮುನಿರತ್ನನನ್ನು ಕೈ ಬಿಟ್ಟಿದ್ದಾರೆ. ಅವನನ್ನು ಮಿನಿಸ್ಟರ್ ಮಾಡಲು ಆಗಲಿಲ್ಲ ಎಂದಮೇಲೆ ಯಾಕೆ ತೆಗೆದುಕೊಂಡರು?. ಎಚ್.ವಿಶ್ವನಾಥ್ ಪಾಪ ಬಾಯಿ ಬಡ್ಕೊತ್ತಿದ್ದಾನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದರು.
ಒಟ್ಟಿನಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊನಚು ಮಾತುಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೂ ಗ್ರಾಸವಾಗಿವೆ.