ಗಡಿ ವಿಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಹೇಳಿಕೆ ಉದ್ಧಟತನದ್ದು. ಮುಂಬೈನ ಅರ್ಧ ಭಾಗ ಕರ್ನಾಟಕ ರಾಜ್ಯಕ್ಕೆ ಸೇರಬೇಕು. ಇದರ ಬಗ್ಗೆ ಮೊದಲು ತೀರ್ಮಾನ ಮಾಡಲಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಬೆಂಗಳೂರು ಮೈಸೂರು ಬ್ಯಾಂಕ್ ಸರ್ಕಲ್‍ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸಿಎಂ ಹೇಳಿಕೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಒಬ್ಬ ಹುಚ್ಚ. ಅವರಪ್ಪ ಬಾಳಾ ಠಾಕ್ರೆ ಸಹ ಹುಚ್ಚ. ಎಂಥದೇ ಪ್ರಸಂಗ ಬರಲಿ ನಮ್ಮ ನೆಲ, ಜಲ ರಕ್ಷಣೆಗೆ ನಾವು ಬದ್ಧರಿದ್ದೇವೆ. ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಬದ್ಧತೆ ಪ್ರದರ್ಶಿಸಬೇಕು, ಕನ್ನಡದ ನೆಲ, ಜಲ ರಕ್ಷಣೆ ವಿಷಯದಲ್ಲಿ ಯಾವುದೇ ರಾಜಿ ಸಾಧ್ಯವೇ ಇಲ್ಲ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಪ್ರಯತ್ನ ನಡೆದರೆ ರಕ್ತಕ್ರಾಂತಿ ಖಚಿತ. ಗಡಿ ವಿಚಾರ ಗಂಭೀರವಾದ ವಿಷಯವಾಗಿದೆ. ಈಗಲಾದರೂ ಕರ್ನಾಟಕ ಸರ್ಕಾರ ಬದ್ಧತೆ ಪ್ರದರ್ಶಿಸಬೇಕು. ಮರಾಠಿಗರಿಗೆ ನೀಡಿರುವ ಎಲ್ಲ ಸವಲತ್ತುಗಳನ್ನು ಹಿಂದಕ್ಕೆ ಪಡೆಯಬೇಕು ಎಂದರು.
ಗಡಿ ವಿಚಾರದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೀಚ ಕೆಲಸ ಮಾಡುತ್ತಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು ಎಂದರು.
ಒಟ್ಟಿನಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಹೇಳಿಕೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕನ್ನಡಿಗರು ಒತ್ತಾಯ ಆರಂಭಿಸಿದ್ದಾರೆ.