ಗಡಿ ವಿಚಾರದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಮಾತನಾಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ರಾಜ್ಯದ ಹಲವು ನಾಯಕರು ಸಖತ್ತಾಗಿಯೇ ಟಾಂಗ್ ಕೊಟ್ಟಿದ್ದಾರೆ. ಅದೇ ರೀತಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ತಿರುಗೇಟು ಕೊಟ್ಟಿದ್ದಾರೆ. ಕರ್ನಾಟಕದ ಒಂದಿಂಚು ಜಾಗವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಅದರ ಬದಲಾಗಿ ಮಹಾರಾಷ್ಟ್ರದ ಗಡಿಯಲ್ಲಿರುವ ಸೊಲ್ಲಾಪುರ, ಸಾಂಗ್ಲಿಯನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಗುಡುಗಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮ ರಾಜ್ಯದ ಒಂದಿಂಚೂ ಭೂಮಿಯನ್ನೂ ನಾವು ಬಿಡುವುದಿಲ್ಲ. ಅದೇ ರೀತಿ ಮಹಾರಾಷ್ಟ್ರದ ಗಡಿಯಲ್ಲಿರುವ ಸೊಲ್ಲಾಪುರ, ಸಾಂಗ್ಲಿಯಲ್ಲಿ ಕನ್ನಡಿಗರು ಹೆಚ್ಚಿದ್ದಾರೆ. ಹೀಗಾಗಿ, ಆ ಭಾಗಗಳನ್ನು ನಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳೋಕೆ ಪ್ರಯತ್ನ ಮಾಡುತ್ತಿದ್ದೇವೆ. ಆ ಬಗ್ಗೆ ನಾವು ಚಿಂತನೆ ಮಾಡುತ್ತಿದ್ದೇವೆ. ಬೆಳಗಾವಿ ಭಾಗದಲ್ಲಿರುವ ಮರಾಠಿಗರು ಶಾಂತಿಯನ್ನು ಉಳಿಸುವ ಪ್ರಯತ್ನ ಮಾಡಬೇಕು. ಅವರು ಕರ್ನಾಟಕಕ್ಕೆ ಸೇರಿದವರು ಎಂಬುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಇಲ್ಲಸಲ್ಲದ ಅನಾವಶ್ಯಕ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಈ ಗಡಿ ವಿವಾದ ಈಗಾಗಲೇ ಇತ್ಯರ್ಥವಾಗಿದೆ. ಮಹಾಜನ್ ವರದಿಯೇ ಅಂತಿಮವಾಗಿದೆ. ಅದಕ್ಕೆ ಪಾರ್ಲಿಮೆಂಟ್ ಕೂಡ ಒಪ್ಪಿಗೆ ನೀಡಿದೆ. ಶಾಂತವಾಗಿರುವ ಬೆಳಗಾವಿ ಪರಿಸ್ಥಿತಿಯನ್ನು ಕದಡಲು ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಉದ್ಧವ್ ಠಾಕ್ರೆ ಶಾಂತಿ ಕದಡುವ ಪ್ರಯತ್ನ ಮಾಡಬಾರದು. ಅಂತಹ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ ಎಂದು ಬೊಮ್ಮಾಯಿ ವಾರ್ನಿಂಗ್ ಕೊಟ್ಟಿದ್ದಾರೆ.
ಉದ್ಧವ್ ಠಾಕ್ರೆ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಒಬ್ಬ ಸಿಎಂ ಆಗಿದ್ದುಕೊಂಡು, ಜವಾಬ್ದಾರಿ ಮರೆತು ಹೇಳಿಕೆ ಕೊಟ್ಟಿದ್ದಾರೆ. ರಾಜಕೀಯಕ್ಕಾಗಿ ಇಂತಹ ಹೇಳಿಕೆ ಕೊಡುವುದು ಬೇಡ. ಸಾಂಗ್ಲಿ, ಸೊಲ್ಲಾಪುರ ಭಾಗವನ್ನು ಕರ್ನಾಟಕಕ್ಕೆ ಸೇರಿಸುವ ಬಗ್ಗೆ ನಾವು ಮಹಾಜನ್ ವರದಿಯಲ್ಲೂ ಮಂಡಿಸಿದ್ದೇವೆ. ಈಗಲೂ ಅದಕ್ಕೆ ನಾವು ಬದ್ಧರಿದ್ದೇವೆ. ಗಡಿ, ನೆಲ, ಜಲ, ಭಾμÉ ವಿಚಾರದಲ್ಲಿ ನಾವು ಎಲ್ಲರೂ ಒಗ್ಗಟ್ಟಾಗಿರುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ರವಾನಿಸಿದ್ದಾರೆ.