Belagavi

ಮಹಾನಗರ ಸ್ವಚ್ಛತೆ, ಪಾಲಿಕೆಯ ಆಡಳಿತ ವ್ಯವಸ್ಥೆ ವಿರುದ್ಧ ಶಾಸಕರ ದೂರು: ಸಚಿವ ಭೈರತಿ ಗರಂ, ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ

Share

ಬೆಳಗಾವಿಯ ಪ್ರವಾಸದಲ್ಲಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಮಹಾನಗರ ಪಾಲಿಕೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಗರದ ಸ್ವಚ್ಛತೆ, ಕಂದಾಯ ಸಂಗ್ರಹ, ಆಡಳಿತ ವ್ಯವಸ್ಥೆ, ಪಾಲಿಕೆಯ ಆದಾಯ, ಖರ್ಚು ವೆಚ್ಚದ ವಿವರವಾದ ಮಾಹಿತಿ ಪಡೆದು, ಶಾಸಕರ ಅಭಿಪ್ರಾಯಗಳನ್ನು ಕೇಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಶುಕ್ರವಾರ ಬೆಳಗ್ಗೆ ಅಧಿಕಾರಿಗಳ ಸಭೆ ನಡೆಸಿದರು.
ಈ ವೇಳೆ ಸಚಿವ ಭೈರತಿ ಬಸವರಾಜ ಮಾತನಾಡಿ, ನಗರದ ಸ್ವಚ್ಛತೆ ಅತಿ ಮುಖ್ಯವಾಗಿದೆ. ಇದರಲ್ಲಿ ಏನೂ ಲೋಪ ಆಗುವಂತಿಲ್ಲ. ಪ್ರತಿ ದಿನವೂ ಆಯುಕ್ತರು ನಗರದ ವಿವಿಧ ಬಡಾವಣೆಗಳಲ್ಲಿ ಸಂಚರಿಸಬೇಕು. ವ್ಯವಸ್ಥೆ ಪರಿಶೀಲಿಸಿ, ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಶಾಸಕ ಅಭಯ ಪಾಟೀಲ ಮಾತನಾಡಿ, ಪೌರ ಕಾರ್ಮಿಕರು ಸರಿಯಾಗಿ ಕೆಲಸ ಮಾಡಿದರೂ, ಗುತ್ತಿಗೆದಾರದಿಂದ ಲೋಪಗಳಾಗುತ್ತಿವೆ. ಗುತ್ತಿಗೆ ಪಡೆದಿರುವವರು ಸರಿಯಾದ ಕೆಲಸ ಮಾಡಲು ಬಿಡುತ್ತಿಲ್ಲ. ಕೇವಲ ಹಾಜರಿ ಹಾಕಿದರೆ ಆಗುವುದಿಲ್ಲ. ಕೆಲಸ ಆಗಬೇಕು. ಈ ಕುರಿತು ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಅನಿಲ ಬೆನಕೆ ದನಿಗೂಡಿಸಿ, ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿ ದಂಡ ವಸೂಲಿಯಾಗಿಲ್ಲ. ತೆರಿಗೆ ವಸೂಲಿಯಲ್ಲೂ ಹಿನ್ನಡೆಯಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಶಾಸಕ ಅಭಯ ಪಾಟೀಲ ಮಾತು ಮುಂದುವರಿಸಿ, ಕೆಲವರು 3 ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದರೂ ವಸೂಲಿ ಮಾಡಲು ಆಗಿಲ್ಲ. ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಸಚಿವ ಭೈರತಿ ಬಸವರಾಜ ಮಾತನಾಡಿ, ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಕಾನೂನು ಉಲ್ಲಂಘನೆಯಾಗಿದ್ದರೆ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕು. ಬಾಕಿ ಉಳಿಸಿಕೊಂಡವರಿಂದ ಹಣ ವಸೂಲಿಗೆ ಸೂಚನೆ ನೀಡಿದ್ದೇನೆ. ಮಹಾನಗರ ಪಾಲಿಕೆಗೆ ಜಿಲ್ಲಾಧಿಕಾರಿ ಅವರೇ ಆಡಳಿತಾಧಿಕಾರಿ ಆಗಿದ್ದಾರೆ. ಅವರಿಗೂ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಈ ವೇಳೆ ಜಿಲ್ಲಾಧಿಕಾರಿ ಎಂಜಿ ಹಿರೇಮಠ, ಮಹಾಪಾಲಿಕೆ ಆಯುಕ್ತ ಜಗದೀಶ ಕೆಎಚ್ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.

Tags:

error: Content is protected !!