ಮಹಾನಗರ ಪಾಲಿಕೆ ಬಳಿ ಕನ್ನಡ ಧ್ವಜ ತೆರವು ಮತ್ತು ಭಗವಾ ಧ್ವಜ ಹಾರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಜನವರಿ 21ರಂದು ನಡೆಸಲು ಉದ್ದೇಶಿಸಿದ್ದ ರ್ಯಾಲಿಗೆ ಅವಕಾಶ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ ಎಂಇಎಸ್ ಮುಖಂಡರು ಅಹವಾಲು ಸಲ್ಲಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರನ್ನು ಎಂಇಎಸ್ ಮುಖಂಡರು, ಕಾರ್ಯಕರ್ತರು ಗುರುವಾರ ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ಈ ವೇಳೆ ಎಂಇಎಸ್ ಮುಖಂಡ ದೀಪಕ ದಳವಿ ಮಾತನಾಡಿ, ಕನ್ನಡ ಧ್ವಜ ಹಾರಿಸಲು ಅವಕಾಶ ನೀಡಿದ್ದೀರಿ. ಭಗವಾ ಧ್ವಜ ಹಾರಿಸಲು ಪಾಲಿಕೆಯಲ್ಲೇ ನಿರ್ಣಯ ತೆಗೆದುಕೊಳ್ಳಲಾಗಿದೆ. ಅವಕಾಶ ಮಾಡಿಕೊಡಿ. ಹೈಕೋರ್ಟ್, ಸುಪ್ರೀಂ ಕೋಟ್ ತೀರ್ಪು ಗಮನಿಸಿ ಎಂಇಎಸ್‍ಗೆ ಧ್ವಜ ಹಾರಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ, ಫೆಬ್ರವರಿ ಮೊದಲ ವಾರದಲ್ಲಿ ಮತ್ತೊಮ್ಮೆ ಸಭೆ ನಡೆಸಿ, ಕೋರ್ಟ್ ಆದೇಶ, ಸೂಚನೆಗಳ ಬಗ್ಗೆ ವಿವರವಾಗಿ ಚರ್ಚಿಸೋಣ. ಫೆಬ್ರವರಿಯಲ್ಲಿ ಸಭೆ ಸೇರಿ ನಿರ್ಧರಿಸೋಣ ಎಂದು ಎಂಇಎಸ್ ಮುಖಂಡರಿಗೆ ತಿಳಿಸಿದರು.
ಈ ವೇಳೆ ಎಂಇಎಸ್ ಮುಖಂಡರು, ಕಾರ್ಯಕರ್ತರು ಇದ್ದರು.