ಬೆಳಗಾವಿ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರು ಉಚಿತವಾಗಿ ಶಾಶ್ವತ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಗುರುವಾರ ಬೆಳಗಾವಿಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆ, ಮಹಾನಗರ ಪಾಲಿಕೆ ಹಾಗೂ ಬುಡಾದಡಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಎಪಿಎಂಸಿಯ ಬಳಿ ನಿರ್ಮಾಣ ಹಂತದಲ್ಲಿರುವ ಮಳಿಗೆಗಳು, ಕೇಂದ್ರ ಬಸ್ ನಿಲ್ದಾಣ ಸೇರಿ ವಿವಿಧ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
: ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು ಏಳೂವರೆ ಕೋಟಿ ವೆಚ್ಛದಲ್ಲಿ ಮಳಿಗೆಗಳನ್ನು ನಿರ್ಮಿಸಿ, ಆದಾಯವನ್ನು ಹೆಚ್ಚಿಸುವ ಕೆಲಸಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ. ಸುಮಾರು 200 ಮಳಿಗೆಗಳನ್ನು ನಿರ್ಮಿಸುವ ಕೆಲಸ ಆಗುತ್ತಿದೆ. ಸಾರ್ವಜನಿಕವಾಗಿ ಹರಾಜಿನ ಮೂಲಕ ಮಳಿಗೆಗಳನ್ನು ವಿತರಿಸಲಾಗುವುದು. ಎರಡು ತಿಂಗಳಲ್ಲಿ ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
: ಇನ್ನು ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ಪೌರಕಾರ್ಮಿಕರಿಗೆ ಶಾಶ್ವತವಾಗಿ ಉಚಿತವಾಗಿ ನೀಡುವ ಕೆಲಸ ಮಾಡುತ್ತಿದ್ದೇವೆ. ಬೆಳಗಾವಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರಿಗೂ ಮನೆ ಕಟ್ಟಿ ಕೊಡುವ ಗುರಿ ಇಟ್ಟುಕೊಂಡಿದ್ದೇವೆ. ಮೊದಲ ಹಂತದಲ್ಲಿ 48 ಮನೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಎರಡನೇ ಹಂತದಲ್ಲಿ 158 ಮನೆಗಳ ನಿರ್ಮಾಣಕ್ಕೆ ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸ್ಮಾರ್ಟ್‍ಸಿಟಿ ಯೋಜನೆ ಪ್ರಧಾನಿ ಮೋದಿ ಕನಸಿನ ಕೂಸಾಗಿದೆ. ಹೀಗಾಗಿ ಕಳೆದ ಬಾರಿ ಕೋವಿಡ್, ನಿರಂತರ ಮಳೆ ಹಿನ್ನೆಲೆ ಕಾಮಗಾರಿ ವೇಗವಾಗಿ ನಡೆಸಲು ಆಗಿರಲಿಲ್ಲ. ಹೀಗಾಗಿ ಇನ್ನು ಮೂರನಾಲ್ಕು ತಿಂಗಳಲ್ಲಿ ವೇಗವಾಗಿ, ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಅದೇ ರೀತಿ ಮಹಾತ್ಮಾ ಗಾಂಧಿ ನಗರ ಯೋಜನೆಯಡಿ ಬೆಳಗಾವಿ ಮಹಾಮನಗರ ಪಾಲಿಕೆಗೆ ಮುಖ್ಯಮಂತ್ರಿಗಳು 125 ಕೋಟಿ ಅನುದಾನ ನೀಡಿದ್ದಾರೆ. ಅದರ ಕ್ರಿಯಾಯೋಜನೆಗೆ ಅನುಮೋದನೆ ಕೊಡಿಸಿದ್ದೇನೆ. ಈ ಎಲ್ಲಾ ಕಾಮಗಾರಿಗಳು ಕೂಡ ಸಧ್ಯದಲ್ಲಿಯೇ ಆರಂಭವಾಗಲಿವೆ ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದರು.
ಈ ವೇಳೆ ಸಚಿವ ಭೈರತಿ ಬಸವರಾಜ್‍ಗೆ ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆಎಚ್, ಸ್ಮಾರ್ಟ್‍ಸಿಟಿ ಎಂಡಿ ಶಶಿಧರ ಕುರೇರ, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಸೇರಿದಂತೆ ಹಲವು ಅಧಿಕಾರಿಗಳು ಸಾಥ್ ನೀಡಿದರು.