Uncategorized

ಬೆಳಗಾವಿ ಪಾಲಿಕೆ ಮುಂದೆ ಕನ್ನಡ ಧ್ವಜದ ಜೊತೆ ಭಗವಾ ಧ್ವಜ ಹಾರಿಸಲು ಎಂಇಎಸ್‍ಗೆ ಅನುಮತಿ ಬೇಕಂತೆ..!

Share

ನಾಡದ್ರೋಹಿ ಎಂಇಎಸ್ ಮುಖಂಡರು ಮತ್ತೆ ಕಾಲು ಕೆರೆದು ಜಗಳಕ್ಕೆ ಬಂದಿದ್ದಾರೆ. ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಿದ್ದಕ್ಕೆ ನಾಡದ್ರೋಹಿಗಳಿಗೆ ಹೊಟ್ಟೆ ಉರಿ ಶುರುವಾಗಿದೆ. ಭಗವಾ ಧ್ವಜವನ್ನೂ ನೆಡಲು ಅನುಮತಿ ನೀಡಬೇಕು ಇಲ್ಲದೇ ಹೋದ್ರೆ ಪಾಲಿಕೆ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಗವಾ ಧ್ವಜ ಹಾರಿಸುತ್ತೇವೆ ಎನ್ನುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು ಡಿ.28ರಂದು ಬೆಳಗಾವಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ನೇತೃತ್ವದಲ್ಲಿ ಕನ್ನಡಿಗರ ಬಹುದಿನಗಳ ಕನಸಾಗಿದ್ದ ಕನ್ನಡ ಧ್ವಜವನ್ನು ಹಾರಿಸಲಾಗಿದೆ. ಇದು ನಾಡದ್ರೋಹಿ ಎಂಇಎಸ್ ಮುಖಂಡರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕನ್ನಡ ಧ್ವಜವನ್ನು ತೆರವುಗೊಳಿಸುವಂತೆ ಮೊನ್ನೆಯಷ್ಟೇ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್‍ಗೆ ಭೇಟಿಯಾಗಿದ್ದ ನಾಡದ್ರೋಹಿ ಎಂಇಎಸ್ ಯುವ ಮುಖಂಡರು ಶನಿವಾರವೂ ಕೂಡ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠರನ್ನು ಭೇಟಿಯಾಗಿ ಕನ್ನಡ ಧ್ವಜ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಒಂದು ಧ್ವಜಕ್ಕೆ ಅನುಮತಿ ನೀಡುವುದಾದ್ರೆ ಭಗವಾ ಧ್ವಜ ಹಾರಿಸಲು ಅನುಮತಿ ನೀಡಬೇಕು. ಇಲ್ಲದಿದ್ರೆ ಪಾಲಿಕೆ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಗವಾ ಧ್ವಜವನ್ನು ಹಾರಿಸುತ್ತೇವೆ ಎಂದಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಗಳು ಸಭೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ವೇಳೆ ಎಂಇಎಸ್‍ನ ಶುಭಂ ಸೆಳಕೆ, ಮದನ್ ಬಾಮನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಒಟ್ಟಾರೆ ಪದೇ ಪದೇ ಕನ್ನಡಿಗರ ಸಹನೆಯನ್ನು ಪರೀಕ್ಷಿಸುತ್ತಿರುವ ನಾಡದ್ರೋಹಿ ಎಂಇಎಸ್ ಮುಖಂಡರ ಈ ನಡೆ ಕನ್ನಡಿಗರನ್ನು ಮತ್ತಷ್ಟು ಕೆರಳುವಂತೆ ಮಾಡಿದೆ.

 

 

Tags:

error: Content is protected !!