Uncategorized

ಬೆಳಗಾವಿ ನಗರದಲ್ಲಿ 10,12 ತರಗತಿ ಪಾಠ, ಪ್ರವಚನ ಆರಂಭ: ಈಗ ಮಕ್ಕಳ ಚಿತ್ತ ಆಫ್ ಲೈನ್ ಕ್ಲಾಸ್‍ಗಳತ್ತ

Share

ಬೆಳಗಾವಿ ನಗರ ಸೇರಿ ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡುವೆಯೇ ಶಾಲೆ, ಕಾಲೇಜು ತೆರೆದಿವೆ. 10 ಮತ್ತು 12ನೇ ತರಗತಿಗಳಲ್ಲಿ ಪಾಠ ಪ್ರವಚನ ಆರಂಭವಾಗಿವೆ. . ಶಾಲೆ, ಕಾಲೇಜು ಕ್ಯಾಂಪಸ್‍ಗಳಲ್ಲಿ ವಿದ್ಯಾರ್ಥಿಗಳ ಕಲರವ ಕೇಳುತ್ತಿದೆ. ಶಿಕ್ಷಕರು ಅದೇ ಸಂಭ್ರಮದಲ್ಲಿ ಪಾಠ, ಪ್ರವಚನಗಳಲ್ಲಿ ತೊಡಗಿದ್ದರೆ, ಮಕ್ಕಳು ಉತ್ಸಾಹದಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

: ಕೋವಿಡ್ 19 ಸೋಂಕು ತಡೆ ಹಿನ್ನೆಲೆಯಲ್ಲಿ ನಿಯಮಗಳನ್ನು ಪಾಲಿಸಿ 10 ಮತ್ತು 12 ತರಗತಿ ಪಾಠ ಪ್ರವಚನಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಮೊದಲ ದಿನವೇ 10 ಮತ್ತು 12 ತರಗತಿಗಳಲ್ಲಿ ಪಾಠ ಪ್ರವಚನಗಳು ಆರಂಭವಾಗಿವೆ. ವಿದ್ಯಾರ್ಥಿಗಳು ಮಾಸ್ಕ ಧರಿಸಿ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲ ಕೋವಿಡ್ ನಿಯಮ ಪಾಲಿಸುತ್ತ ಪಾಠ ಪ್ರವಚನಕ್ಕೆ ಹಾಜರಾಗುತ್ತಿದ್ದಾರೆ.

ಬಹುತೇಕ ಶಿಕ್ಷಕರು ಕೋವಿಡ್ ನಿಯಮಗಳ ಅನುಸಾರ ಪಾಠ, ಪ್ರವಚನದಲ್ಲಿ ತೊಡಗಿದ್ದಾರೆ. ಆರ್‍ಎಲ್‍ಎಸ್ ಕಾಲೇಜು, ಮಹೇಶ ಪಿಯು ಕಾಲೇಜು ಸೇರಿ ಪ್ರಮುಖ ಶಾಲೆ, ಕಾಲೇಜುಗಳು ಆರಂಭವಾದ ಖುಷಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಉತ್ಸಾಹ ಗಮನ ಸೆಳೆಯುವಂತಿದೆ.

ವಿದ್ಯಾರ್ಥಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿದರೆ ಹೆಚ್ಚಿನ ತರಗತಿಗಳನ್ನು ಆರಂಭಿಸಲು ಶಾಲೆ, ಕಾಲೇಜುಗಳಲ್ಲಿ ತಯಾರಿಯೂ ನಡೆದಿದೆ.
ಈ ವೇಳೆ ಆರ್‍ಎಲ್‍ಎಸ್ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಜೆ.ನಂಜಪ್ಪನವರ ಮಾತನಾಡಿ, ಯುವಶಕ್ತಿಯ ಉತ್ಸಾಹ ನೋಡಿ ಖುಷಿಯಾಗಿದೆ. ಭಣಗುಡುತ್ತಿದ್ದ ಕಾಲೇಜು ಕ್ಯಾಂಪಸ್‍ಗೆ ಜೀವಕಳೆ ಬಂದಿದೆ. ಕೋವಿಡ್ 19 ಹಲವು ಪಾಠಗಳನ್ನು ನಮಗೆ ಕಲಿಸಿದೆ. ಆಫ್ ಲೈನ್ ಕ್ಲಾಸ್‍ಗಳ ಮಹತ್ವದ, ಆನ್ ಲೈನ್ ಕ್ಲಾಸ್‍ಗಳ ಅನಿವಾರ್ಯತೆ ಎರಡನ್ನೂ ನಾವು ಮನವರಿಕೆ ಮಾಡಿಕೊಂಡಿದ್ದೇವೆ. ಆತಂಕ ದೂರ ಮಾಡಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ದಾರಿ ಮಾಡಬೇಕಿದೆ. ಶಿಕ್ಷಣ ಇಲಾಖೆ ನಿರ್ಧಾರದಿಂದ ನಮಗಂತೂ ಖುಷಿಯಾಗಿದೆ.

ಇದಕ್ಕಾಗಿ ಶಿಕ್ಷಣ ಸಚಿವರನ್ನು ಅಭಿನಂದಿಸುತ್ತೇವೆ. ಇನ್ನು ನಮ್ಮ ಕಾಲೇಜಿನ ಶಿಕ್ಷಕರು ಅರ್ಧ ಗಂಟೆ ಮೊದಲೇ ಕಾಲೇಜಿಗೆ ಬಂದು ಮಕ್ಕಳ ಸ್ವಾಗತಕ್ಕೆ ಸಜ್ಜಾಗಿದ್ದರು. ಇದಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ? ಆದರೂ ಕೆಲವೇ ಕೆಲವು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಸೋಮವಾರದಿಂದ ಎಲ್ಲ ಮಕ್ಕಳೂ ಕಾಲೇಜಿಗೆ ಬರುವ ನಿರೀಕ್ಷೆ ನಮ್ಮದು ಎಂದರು.

ಮಹೇಶ ಪಿಯು ಕಾಲೇಜಿನ ವಿದ್ಯಾರ್ಥಿನಿ ಕೃತಿಕಾ ಕೇಶವ ಆದಿ ಮಾತನಾಡಿ, ಕಾಲೇಜು ಆರಂಭವಾಗಿರುವುದರಿಂದ ಖುಷಿಯಾಗಿದೆ. ಆನ್‍ಲೈನ್‍ನಲ್ಲಿ ತಿಳಿಯಲಾರದ್ದು, ಆಫ್‍ಲೈನ್‍ನಲ್ಲಿ ಮನವರಿಕೆ ಆಗುತ್ತದೆ ಎಂಬ ನಿರೀಕ್ಷೆ ಇದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಕಾಲೇಜು ಆರಂಭಿಸಿರುವುದು, ಸುರಕ್ಷತೆಗೆ ಆದ್ಯತೆ ನೀಡಿರುವುದು ನಮ್ಮ ಆತಂಕ ದೂರ ಮಾಡಿದೆ ಎಂದರು.

ಇನ್ನು ಆರ್‍ಎಲ್‍ಎಸ್ ಪಿಯು ಕಾಲೇಜಿನ ಎನ್.ವಿ.ಶ್ರೀಹರಿ ಮಾತನಾಡಿ, ಇಡೀ ಕಾಲೇಜನ್ನು ಸ್ಯಾನಿಟೈಸ್ ಮಾಡಿದ್ದಾರೆ. ಸುರಕ್ಷತೆ ನಮ್ಮ ಆದ್ಯತೆಯಾಗಿದ್ದರೆ ಎಲ್ಲರ ಮನಸ್ಸಿನಿಂದ ಕೋವಿಡ್ ದೂರವಾಗುತ್ತದೆ. ಕಾಲೇಜು ಆರಂಭವಾಗಿರುವುದು ಖುಷಿ ನೀಡಿದೆ ಎಂದರು.

ಒಟ್ಟಿನಲ್ಲಿ ಕೋವಿಡ್ 19 ಸೋಂಕು ಆತಂಕ ದೂರ ಮಾಡಿ ಮಕ್ಕಳಲ್ಲಿ ವಿಶ್ವಾಸ ಮೂಡಿಸಲು ಮತ್ತು ಪಾಠ ಪ್ರವಚನ ಆರಂಭಿಸಿ ಮಕ್ಕಳ ಶೈಕ್ಷಣಿಕ ಬದುಕಿಗೆ ದಾರಿ ಮಾಡಿಕೊಡಲು ಸರ್ಕಾರ ದಿಟ್ಟ ಹೆಜ್ಜೆ ಇರಿಸಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ವಿದ್ಯಾರ್ಥಿಗಳೂ ಖುಷಿಯಿಂದ ಶಾಲೆ, ಕಾಲೇಜುಗಳತ್ತ ತೆರಳಿದ್ದಾರೆ.

Tags:

error: Content is protected !!