ಬೆಳಗಾವಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯುತ್ತಮ ಸಾಧನೆ ಮಾಡಿದೆ. 8 ತಾಲೂಕುಗಳ 731 ಗ್ರಾಮ ಪಂಚಾಯಿತಿಗಳ ಪೈಕಿ 381ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದರು.
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ಬೆಳಗಾವಿ ವಿಧಾನಸಭೆ ಕ್ಷೇತ್ರದ 44 ಗ್ರಾಮ ಪಂಚಾಯಿತಿಗಳ ಪೈಕಿ 33ರಲ್ಲಿ ಕಾಂಗ್ರೆಸ್, ಖಾನಾಪುರದಲ್ಲಿ 51ರ ಪೈಕಿ 26, ಕಿತ್ತೂರಲ್ಲಿ 32ರ ಪೈಇ 17, ಬೈಲಹೊಂಗಲದಲ್ಲಿ 27ರ ಪೈಕಿ 15, ಸವದತ್ತಿಯಲ್ಲಿ 28ರ ಪೈಕಿ 15, ರಾಮದುರ್ಗದಲ್ಲಿ 33ರ ಪೈಕಿ 20ರಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ. ಇನ್ನು ಸವದತ್ತಿ ಕ್ಷೇತ್ರದ 3 ಗ್ರಾಮ ಪಂಚಾಯಿತಿಗಳಲ್ಲಿ ಸಮಬಲ ಇದೆ. ಅದು ಕಾಂಗ್ರೆಸ್ ಕಡೆ ವಾಲುವುದು ಖಚಿತ. ಒಟ್ಟು 731 ಗ್ರಾಮ ಪಂಚಾಯಿತಿಗಳ ಪೈಕಿ 381ರಲ್ಲಿ ಕಾಂಗ್ರೆಸ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎಂದರು.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ಚಿಕ್ಕೋಡಿ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ 218 ಗ್ರಾಮ ಪಂಚಾಯಿತಿಗಳ ಪೈಕಿ 114ರಲ್ಲಿ ಕಾಂಗ್ರೆಸ್ ಬೆಂಬಲಿತರು ಬಹುಮತ ಪಡೆದಿದ್ದಾರೆ. ನಿಪ್ಪಾಣಿ ಕ್ಷೇತ್ರದ 27 ಪಂಚಾಯಿತಿಗಳ ಪೈಕಿ 15ರಲ್ಲಿ, ಚಿಕ್ಕೋಡಿ ಸದಲಗಾದ 27ರ ಪೈಕಿ 18, ಕಾಗವಾಡದ 21ರ ಪೈಕಿ 6, ಅಥಣಿಯ 30ರ ಪೈಕಿ 11, ರಾಯಬಾಗದ 26ರ ಪೈಕಿ 8, ಕುಡಚಿಯ 21ರ ಪೈಕಿ 11, ಹುಕ್ಕೇರಿಯ 33ರ ಪೈಕಿ 10, ಯಮಕನಮರಡಿಯ 35ರ ಪೈಕಿ 35ರಲ್ಲಿ ಕಾಂಗ್ರೆಸ್ ಬೆಂಬಲಿಗರು ಬಹುಮತ ಪಡೆದಿದ್ದಾರೆ ಎಂದರು.
ಒಟ್ಟಿನಲ್ಲಿ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದರು.