ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 4 ಜನರ ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿದ್ದರೆ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಜನ ಶಿಕ್ಷಕರಿಗೆ ಮಹಾಮಾರಿ ಕೊರೊನಾ ಕಾಣಿಸಿಕೊಂಡಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿಗಳು ಸರ್ಕಾರದ ಸೂಚನೆಯಂತೆ ಶಾಲೆ, ಕಾಲೇಜು ಆರಂಭಿಸಲಾಗಿದೆ. ಅದೇ ರೀತಿ ವಿದ್ಯಾಗಮ ಕೂಡ ಆರಂಭಿಸಲಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಹುಕ್ಕೇರಿಯಲ್ಲಿ ಇಬ್ಬರು ಹಾಗೂ ರಾಯಬಾಗನಲ್ಲಿ ಇಬ್ಬರು ಶಿಕ್ಷಕರಿಗೆ ಸೋಂಕು ಕಾಣಿಸಿಕೊಂಡಿದೆ.
ಅದೇ ರೀತಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ನಗರದಲ್ಲಿ 4, ಗ್ರಾಮೀಣದಲ್ಲಿ 10, ರಾಮದುರ್ಗದಲ್ಲಿ 3, ಕಿತ್ತೂರಿನ 1 ಸೇರಿ ಒಟ್ಟು 18 ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರಿಗೆಲ್ಲಾ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ. ಇವರ್ಯಾರು ಕೂಡ ಶಾಲೆಗೆ ಹೋಗಿರಲಿಲ್ಲ.
ಹೀಗಾಗಿ ಶಾಲಾ-ಕಾಲೇಜುಗಳನ್ನು ಬಂದ್ ಮಾಡುವ ಅವಶ್ಯಕತೆ ಇಲ್ಲ. ಆದ್ರೆ ಕಡೋಲಿ ಒಂದೇ ಗ್ರಾಮದಲ್ಲಿ ನಾಲ್ವರು ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ 1 ವಾರ ಶಾಲೆ ಬಂದ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು. ನಂತರ ಶಾಲೆಯನ್ನು ಸ್ಯಾನಿಟೈಜರ್ ಮಾಡಿ ಮತ್ತೆ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.