ಬೆಳಗಾವಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗಳನ್ನು ಸಮರ್ಪಕವಾಗಿ ಎದುರಿಸಲಾಗದೇ ನುಣುಚಿಕೊಂಡು ಕಾರು ಏರಿ ಹೊರಟರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿರುವ ಜನಸೇವಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಸಹಿತ ರಾಜ್ಯ ನಾಯಕರ ದಂಡು ಬೆಳಗಾವಿಗೆ ಆಗಮಿಸುತ್ತಿದೆ. ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಭಾನುವಾರ ಬೆಳಗ್ಗೆ ಬಂದಿಳಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ಬಿಜೆಪಿ ನಾಯಕರು ಹೂ ಗುಚ್ಛ ನೀಡಿ ಬರಮಾಡಿಕೊಂಡರು. ಆದರೆ ಅಷ್ಟರಲ್ಲಿ ಪ್ರಶ್ನೆಗಳೊಂದಿಗೆ ಸುದ್ದಿಗಾರರು ಎದುರಾದರು. ಆದರೆ ಅರುಣಸಿಂಗ್ ಸುದ್ದಿಗಾರರ ಪ್ರಶ್ನೆಗೆ ಸಾವಧಾನದಿಂದ ಉತ್ತರಿಸುವ ವ್ಯವಧಾನ ತೋರದೇ, ಇಂದು ಸಚಿವ ಅಮಿತ್ ಶಾ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದಷ್ಟೇ ತಿಳಿಸಿ ಕಾರಿನತ್ತ ಹೊರಟರು. ಅರುಣಸಿಂಗ್ ಅವರನ್ನು ಹಿಂಬಾಲಿಸಿದ ಪತ್ರಕರ್ತರ ಗುಂಪು ಬೆಳಗಾವಿ ಲೋಕಸಭೆ ಉಪಚುನಾವಣೆ ಕುರಿತಂತೆ ಪ್ರಶ್ನೆ ಕೇಳಲು ಮುಂದಾದಾಗ, ಚುನಾವಣೆ ಘೋಷಣೆಯಾಗಲಿ, ನೋಡೋಣ ಎನ್ನುತ್ತ ಕಾರು ಚಲಾಯಿಸುವಂತೆ ಚಾಲಕನಿಗೆ ಸೂಚನೆ ನೀಡಿದರು.
ಒಟ್ಟಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ವರ್ತನೆ ಸುದ್ದಿಗಾರರಿಗೆ ಬೇಸರ ತರಿಸಿತು.