Politics

ಬಿಜೆಪಿ ಶಾಸಕರು-ಸಿಎಂ ಬಿಎಸ್‍ವೈ ಸಭೆ ಅಂತ್ಯ..ಸಭೆ ಬಗ್ಗೆ ಸಚಿವದ್ವಯರು ಹೇಳಿದ್ದೇನು..?

Share

ಎರಡು ದಿನಗಳ ಬಿಜೆಪಿ ಶಾಸಕರ ಜೊತೆಗಿನ ಸಿಎಂ ಯಡಿಯೂರಪ್ಪ ಸಭೆ ಮುಗಿದಿದೆ. ಸಭೆಯಲ್ಲಿ ಬಿಜೆಪಿ ಶಾಸಕರು ತಮ್ಮ ಅಸಮಾಧಾನ, ಅಳಲನ್ನು ಮುಖ್ಯಮಂತ್ರಿಗಳ ಬಳಿಕ ತೋಡಿಕೊಂಡಿದ್ದಾರೆ. ಎಲ್ಲರನ್ನು ಸಮಾಧಾನಪಡಿಸಿರುವ ಸಿಎಂ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ. ಸಭೆ ಕುರಿತು ಸರ್ಕಾರದ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಸಚಿವರ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ ಮುಂದಿನ ದಿನಮಾನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುವ ಉದ್ದೇಶದಿಂದ ಶಾಸಕರ ಸಭೆಯನ್ನು ಕರೆಯಲಾಗಿತ್ತು. ಮುಖ್ಯಮಂತ್ರಿಗಳ ಜೊತೆ ಎಲ್ಲಾ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಸೇರಿದಂತೆ ಎಲ್ಲಾ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿದ್ದಾರೆ ಎಂದು ಹೇಳಿದರು. ಇನ್ನು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದರಿಂದ ಎಲ್ಲಾ ಪಕ್ಷಗಳಿಗಿಂತ ಅತೀ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಇದೇ ವೇಳೆ ಲಕ್ಷ್ಮಣ ಸವದಿ ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗುವುದಿಲ್ಲ. ಹೀಗಾಗಿ ಮುಖ್ಯಮಂತ್ರಿಗಳು ವಿಭಾಗವಾರು ಶಾಸಕರ ಸಭೆಯನ್ನು ಕರೆದಿದ್ದರು. ಸಭೆಯಲ್ಲಿ ಶಾಸಕರ ಭಾವನೆಗೆ ಮುಖ್ಯಮಂತ್ರಿಗಳು ಒಳ್ಳೆಯ ರೀತಿಯಲ್ಲಿ ಸ್ಪಂದಿಸಿದ್ದಾರೆ. ಕೋವಿಡ್, ಪ್ರವಾಹದಂತ ಕಠಿಣ ಪರಿಸ್ಥಿತಿಯಲ್ಲಿ ಇಡೀ ದೇಶವೇ ಮೆಚ್ಚುವಂತೆ ಮುಖ್ಯಮಂತ್ರಿಗಳು ಆಡಳಿತ ನೀಡಿದ್ದಾರೆ ಎಂದು ಹೇಳಿದರು.

ಬಳಿಕ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ ಸಭೆಯಲ್ಲಿ ಅವರವರ ಅಭಿಪ್ರಾಯಗಳನ್ನು ಹೇಳುವಾಗ ಸಣ್ಣಪುಟ್ಟ ಗೊಂದಲಗಳು ಆಗುವುದು ಸರ್ವೇಸಾಮಾನ್ಯ. ಕೋವಿಡ್, ಪ್ರವಾಹದಿಂದ ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿಯೂ ಅತ್ಯುತ್ತಮವಾಗಿ ಸಿಎಂ ಕಾರ್ಯ ನಿರ್ವಹಿಸಿದ್ದಾರೆ ಎಂದರು. ಇನ್ನು ಪಕ್ಷದ ಆಂತರಿಕ ವಿಷಯದ ಬಗ್ಗೆ ಮಾತನಾಡಲು ಅಧ್ಯಕ್ಷರಿಗೆ ಅಧಿಕಾರ ಇರುತ್ತದೆ ಎಂದು ಹೇಳುವ ಮೂಲಕ ಸಭೆಯಲ್ಲಿ ಶಾಸಕರ ಅಸಮಧಾನದ ಕುರಿತು ಪ್ರತಿಕ್ರಿಯೆ ನೀಡದೇ ಗೋವಿಂದ ಕಾರಜೋಳ ಜಾರಿಕೊಂಡರು.

ಅಂತೂ ಇಂತೂ ಎರಡು ದಿನಗಳ ಬಿಜೆಪಿ ಶಾಸಕರ ಸಭೆಯನ್ನು ಸಿಎಂ ಬಿಎಸ್‍ವೈ ಮಾಡಿ ಕೈ ತೊಳೆದುಕೊಂಡಿದ್ದಾರೆ. ಮುಂದೆ ಶಾಸಕರ ಸಮಸ್ಯೆಗಳು ಪರಿಹಾರ ಆಗದೇ ಇದ್ದರೆ ಮತ್ತೆ ಬಿಜೆಪಿ ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕುವುದು ಗ್ಯಾರಂಟಿ.

 

Tags:

error: Content is protected !!