Politics

ಬಿಜೆಪಿಯದ್ದು ದರಿದ್ರ ಸರ್ಕಾರ..ಕೇಸರಿ ಪಡೆ ವಿರುದ್ಧ ಗುಡುಗಿದ ಸಿದ್ದರಾಮಯ್ಯ..!

Share

 

ಬಿಜೆಪಿಯವರು ಸಗಣಿ ಎತ್ತಿಲ್ಲ, ಗಂಜಲ ಬಾಚಿಲ್ಲ. ಆದರೆ ಗೋಮಾತೆ ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಬಿಜೆಪಿ ಬೆಂಬಲಿಗರೇ ದನದ ಮಾಂಸ ರಫ್ತು ಮಾಡುತ್ತಾರೆ. ಬಿಜೆಪಿಯದ್ದು ದರಿದ್ರ ಸರ್ಕಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯನವರ ಬೆಂಗಳೂರಿನ ನಿವಾಸದಲ್ಲಿ ರವಿವಾರ ಬಿಜೆಪಿ ಸರ್ಕಾರದ ಐದು ಜನ ವಿರೋಧಿ ಕಾಯ್ದೆಗಳ ಬಗ್ಗೆ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರ ಐದು ಕಾಯ್ದೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಸುಳ್ಳು ಯಾವುದು ಸತ್ಯ ಯಾವುದು ಎಂಬ ಅಂಶಗಳನ್ನು ಸೇರಿಸಿ ನಾವು ಒಂದು ಕಿರು ಪುಸ್ತಕವನ್ನು ಹೊರ ತಂದಿದ್ದೇವೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆ 2020, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ರೈತರೊಂದಿಗೆ ಕೃಷಿ ಬೆಲೆ ಖಾತ್ರಿ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಕಾಯ್ದೆಗಳ ಸರಿ ತಪ್ಪುಗಳ ಅಂಶಗಳನ್ನು ಲಗತ್ತಿಸಿರುವ ಕಿರು ಹೊತ್ತಿಗೆ ಹೊರ ತರಲಾಗಿದೆ ಎಂದರು. ಬಿಜೆಪಿ ಸರ್ಕಾರದ ಜನ ವಿರೋಧ ಕಾಯಿದೆಗಳನ್ನು ಇಟ್ಟುಕೊಂಡು ಶೀಘ್ರದಲ್ಲೇ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಇದಕ್ಕಾಗಿ ಜೈಲಿಗೆ ಹೋಗೋಕೂ ಸಿದ್ಧ ಎಂದು ಸಿದ್ದರಾಮಯ್ಯ ಗುಡುಗಿದರು.

ಎಪಿಎಂಸಿ ಕ್ರಮೇಣ ಸತ್ತು ಹೋಗುತ್ತದೆ. ಎಪಿಎಂಸಿಯನ್ನು ಪೂರ್ತಿಯಾಗಿ ಮುಗಿಸಿಬಿಡುವುದು ಬಿಜೆಪಿ ಉದ್ದೇಶ. ದೇವರಾಜ ಅರಸು ಅವರು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೆ ಭೂಮಿ ಒಡೆಯ ಎಂದು ಮಾಡಿದರು. ಅದರಿಂದ ಸಾವಿರಾರು ಜನ ಭೂ ಮಾಲೀಕರಾದರು. ಈಗ ಇದಕ್ಕೆ ತಿದ್ದುಪಡಿ ಮಾಡಿದ್ದಾರೆ. ಈಗ ಯಾರು ಬೇಕಾದರೂ ಭೂಮಿ ತೆಗೆದುಕೊಳ್ಳಬಹುದು ಎಂದು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಬಿಜೆಪಿಯವರು ದರಿದ್ರದವರು. ಅವರದ್ದು ದರಿದ್ರ ಸರ್ಕಾರ. ನಮ್ಮ ಹಳ್ಳಿಯಲ್ಲಿ ನೀನು ತಂದಾಕು ನಾನು ಉಂಡಾಕ್ತೀನಿ ಅನ್ನೋ ಜಾಯಮಾನ ಬಿಜೆಪಿಯವರದ್ದು. ಬಿಜೆಪಿ ಅವರೇ ಗೋಮಾಂಸವನ್ನು ರಪ್ತು ಮಾಡುವವರು. ಗೋ ಹತ್ಯೆ ನಿಷೇಧದಿಂದ ಹಳ್ಳಿಯ ರೈತರ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಚರ್ಮೋದ್ಯಮದ ಮೇಲೂ ದುಷ್ಪರಿಣಾಮ ಬೀರುತ್ತದೆ. ನರೇಂದ್ರ ಮೋದಿ ಅವರು ಗ್ಯಾಸ್ ಮತ್ತು ಪೆಟ್ರೋಲ್ ಬಗ್ಗೆ ಮಾತನಾಡುವುದಿಲ್ಲ. ಇವರು ಬರುವ ಮುನ್ನ 300 ರೂಪಾಯಿ ಗ್ಯಾಸ್ ರೇಟ್ ಇತ್ತು. ಈಗ 700 ರೂ. ಆಗಿದೆ ಎಂದು ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಐದು ಕಾಯ್ದೆಗಳ ವಿರುದ್ಧ ಕಿರು ಹೊತ್ತಿಗೆ ಬಿಡುಗಡೆ ಮಾಡಿರುವ ಕಾಂಗ್ರೆಸ್. ಮುಂದೆ ಹೋರಾಟಕ್ಕೂ ಸಜ್ಜಾಗುತ್ತಿದೆ ಎಂಬುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

 

 

Tags:

error: Content is protected !!