ಇಂದು ತ್ಯಾಗವೀರ, ಆಧುನಿಕ ಕರ್ಣ, ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯ ಹರಿಕಾರ ಸಿರಸಂಗಿ ಲಿಂಗರಾಜ ದೇಸಾಯಿ ಅವರ 160ನೇ ಜಯಂತಿಯನ್ನು ನಾಡಿನಾಧ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಬೆಳಗಾವಿಯಲ್ಲಿಯೂ ಆಯೋಜನೆ ಮಾಡಲಾಗಿತ್ತು.
ಹೌದು ರವಿವಾರ ಬೆಳಗಾವಿಯ ಕೆಎಲ್‍ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಸಭಾಂಗಣದಲ್ಲಿ ತ್ಯಾಗವೀರ, ಮಹಾದಾನಿ ಸಿರಸಂಗಿ ಲಿಂಗರಾಜ್‍ರ 160ನೇ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ಗಣ್ಯರು ಲಿಂಗರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
: ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜಿ.ಎ.ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೊ.ಬಿ.ಎಚ್.ಮಾರದ ಮಾತನಾಡಿ ವಿಶ್ವಗುರು ಬಸವೇಶ್ವರರ ದಾಸೋಹದ ಪರಿಕಲ್ಪನೆಯಂತೆ ಇಡೀ ಸಮಾಜಕ್ಕೆ ತಮ್ಮ ಆಸ್ತಿಯನ್ನು ದಾನ ಮಾಡಿದ ಪುಣ್ಯಪುರುಷ ಲಿಂಗರಾಜರು. ಕೊಟ್ಟವನು ಕೊಟ್ಟಿದ್ದೇನೆ ಎನ್ನುವ ಹಾಗಿಲ್ಲ. ತೆಗೆದುಕೊಂಡವನು ತೆಗೆದುಕೊಂಡಿದ್ದೇನೆ ಎನ್ನುವ ಹಾಗಿಲ್ಲ. ಕೊಟ್ಟವನಿಗೆ ಅಹಂ ಇಲ್ಲ. ತೆಗೆದುಕೊಂಡವನಿಗೆ ಋಣಭಾರ ಇಲ್ಲ ಎಂಬುದು ಬಸವಾದಿ ಶರಣರ ದಾಸೋಹ. ಇದಕ್ಕೆ ಬಸವಣ್ಣನವರು ಹೇಳಿದ್ದು ಸೋಹಂ ಎಂದಿನಿಸದೇ ದಾಸೋಹಂ ಎಂದೆನಿಸಯ್ಯ ಎಂಬಂತೆ ತಮ್ಮ ಆಸ್ತಿಯನ್ನು ಸಮಾಜಕ್ಕೆ ದಾನ ಮಾಡಿದ ತ್ಯಾಗವೀರ ಲಿಂಗರಾಜರು ಎಂದೆಂದಿಗೂ ಅಜರಾಮರು ಎಂದು ಅವರ ಬದುಕಿನ ಹಲವು ಮಜಲುಗಳನ್ನು ಈ ವೇಳೆ ಅವರು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಎಲ್‍ಇ ಉಪಾಧ್ಯಕ್ಷ ಬಸವರಾಜ್ ತಟವಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ್, ಡಾ.ಎಚ್.ಎಮ್.ಚನ್ನಪ್ಪಗೋಳ, ಡಾ.ಮಹೇಶ ಗುರನಗೌಡರ ಸೇರಿದಂತೆ ಇನ್ನು ಹಲವು ಗಣ್ಯರು ಉಪಸ್ಥಿತರಿದ್ದರು.