ಜನವರಿ 26ರಂದು ಗಣರಾಜ್ಯೋತ್ಸವ ನಿಮಿತ್ಯ ರಾಷ್ಟ್ರಧ್ವಜಕ್ಕೆ ಆಗುವ ಅವಮಾನ ತಡೆಗಟ್ಟುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ ಆದೇಶದಂತೆ ಪ್ಲಾಸ್ಟಿಕ್ ಧ್ವಜವನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಗುರುವಾರ ಬೆಳಗಾವಿ ಡಿಸಿ ಕಚೇರಿಗೆ ಆಗಮಿಸಿದ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ರಾಷ್ಟ್ರಧ್ವಜವು ರಾಷ್ಟ್ರದ ಗೌರವದ ಪ್ರತೀಕವಾಗಿದೆ. ಆದರೆ ದುರ್ದೈವದ ಸಂಗತಿ ಎಂದರೆ ಹೆಚ್ಚಿನ ಭಾರತೀಯರಿಗೆ ರಾಷ್ಟ್ರಧ್ವಜ ನೆನಪಾಗುವುದು ಆಗಸ್ಟ್ 15 ಹಾಗೂ ಜನವರಿ 26ರಂದು ಮಾತ್ರ ಈ ದಿನದಿಂದು ರಾಷ್ಟ್ರಧ್ವಜವನ್ನು ಅತ್ಯಂತ ಗೌರವದಿಂದ ಹಾರಿಸಲಾಗುತ್ತದೆ. ಆದರೆ ಕಾಗದ ಹಾಗೂ ಪ್ಲಾಸ್ಟಿಕ್‍ನಿಂದ ತಯಾರಿಸಿದ ರಾಷ್ಟ್ರಧ್ವಜವನ್ನು ಸಂಜೆಯಾಗುತ್ತಿದ್ದಂತೆ ರಸ್ತೆ ಮೇಲೆ, ಕಸದ ಬುಟ್ಟಿ, ಚರಂಡಿಯಲ್ಲಿ ಬಿದ್ದಿರುವುದನ್ನು ಕಾಣುತ್ತೇವೆ. ಹೀಗಾಗಿ ಈ ರಾಷ್ಟ್ರಧ್ವಜಕ್ಕೆ ಅವಮಾನ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ವಂದೇಮಾತರಂ, ಭಾರತ್ ಮಾತಾಕಿ ಜೈ ಘೋಷಣೆ ಕೂಗಿದ್ದು ಕಂಡು ಬಂತು.
ಇದೇ ವೇಳೆ ಮಾತನಾಡಿದ ಉಜ್ವಲಾ ಗಾವಡೆ ಅವರು ರಾಷ್ಟ್ರಧ್ವಜ ನಮ್ಮ ಅಸ್ಮಿತೆ ಗೌರವವಾಗಿದೆ. ನಮ್ಮ ಸೈನಿಕರು ಅದನ್ನು ಕಾಪಾಡಿಕೊಳ್ಳಲು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. ಆದರೆ ದೇಶದ ನಾಗರಿಕರು ಪ್ಲಾಸ್ಟಿಕ್ ಧ್ವಜವನ್ನು ಹಾರಿಸಿದ ನಂತರ ಎಲ್ಲೆಂದರಲ್ಲಿ ಬೀಸಾಕುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಘಟನೆ ಪ್ರತಿ ವರ್ಷ ನೋಡುತ್ತಿದ್ದೇವೆ. ಹೀಗಾಗಿ ಈ ಬಾರಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುಧೀರ್ ಹೆರೇಕರ್, ಮಿಲನ್ ಪವಾರ್, ಮಾಧುರಿ ಜಾಧವ್, ಸದಾನಂದ ಮಸಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.