ಕೊರೊನಾ ಮಹಾಮಾರಿಯ ಹಾವಳಿಯಿಂದ ಜನರು ತತ್ತರಿಸಿದ್ದು, ಲಾಕ್‌ಡೌನ್ ತೆರವಿನ ಬಳಿಕ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ, ಸರ್ಕಾರ, ಸರ್ಕಾರದ ಯೋಜನೆಗಳ ಪುನರಾರಂಭಕ್ಕೆ ಮಾತ್ರ ಇನ್ನು ಕೊರೊನಾ ಹಾವಳಿಯ ನೆಪವಾಗಿಯೇ ಉಳಿದಿದೆ.

ಇದರಿಂದಾಗಿ ಜನರಿಗೆ ಅನುಕೂಲಕರವಾಗಬೇಕಿದ್ದ ಯೋಜನೆಗಳು ಹಳ್ಳ ಹಿಡಿದಿದ್ದು, ಜನರ ಸಿಗದೇ ಪರದಾಟ ನಡೆಸಿದ್ರೆ, ಅದನ್ನೇ ಕೆಲವರು ದುರ್ಬಳಕೆ ಮಾಡಿಕೊಂಡು ಹಗಲು ದರೋಡೆ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ…
ಹೌದು….ರೈಲುಗಳಿಂದ ಹೊರ ಬರುತ್ತಿರುವ ಪ್ರಯಾಣಿಕರು, ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣ ಆಗಿರುವ ಪ್ರಿಪೇಯ್ಡ್ ಆಟೋ ಸ್ಟ್ಯಾಂಡ್, ಪ್ರಯಾಣಿಕರನ್ನ ತಮ್ಮ ಆಟೋದಲ್ಲಿ ಕರೆದುಕೊಂಡು ಹೋಗಲು ನಿಂತಿರುವ ಚಾಲಕರು- ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ… ಪ್ರಯಾಣಿಕರಿಗೆ ಅನುಕೂಲ ಆಗಲಿ ಅನ್ನೋ ಕಾರಣಕ್ಕೆ ಕಳೆದ ವರ್ಷ ಜನವರಿಯಲ್ಲಿ ಪ್ರಿಪೇಯ್ಡ್ ಆಟೋ ಸೇವೆಯನ್ನು ಆರಂಭಿಸಲಾಗಿತ್ತು.
1.6 ಕಿಮೀಗೆ 28 ರೂಪಾಯಿ ಪಡೆಯುತ್ತಿದ್ದ ಆಟೋ ಚಾಲಕರು ತಮ್ಮ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಆರಂಭಿಕ ಹಂತದಲ್ಲಿ ಅವಳಿ ನಗರದಲ್ಲಿ ಓಡಾಡಿದ ಆಟೋಗಳು ಕೊರೊನಾ ಆತಂಕದಿಂದಾಗಿ ಸೇವೆಯನ್ನು ಸ್ಥಗಿತಗೊಳಿಸಿದ್ದವು. ಆದರೆ, ಇದೀಗ ರೈಲುಗಳು ಆರಂಭವಾದ್ರೂ ಪ್ರಿಪೇಯ್ಡ್ ಆಟೋ ಸೇವೆ ಆರಂಭವಾಗಿಲ್ಲ. ಇದಿರಂದ ಜನರಿಗೆ ಅನಾನುಕೂಲ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನೂ ಕೊರೊನಾ ಹಾವಳಿಯಿಂದ ರೈಲು ಸಂಚಾರ ಸ್ಥಗಿತಗೊಂಡು, ಪ್ರಯಾಣಿಕರಿಲ್ಲದೇ ಆಟೋ ಸೇವೆಯನ್ನು ಬಂದ್ ಮಾಡಲಾಗಿದೆ. ಆದರೆ ಲಾಕ್‌ಡೌನ್ ತೆರವುಗೊಳಿಸಿದ ಬಳಿಕ ಆರಂಭವಾಗಬೇಕಿದ್ದ ಆಟೋ ಸೇವೆ ಆರಂಭವಾಗಿಲ್ಲ. ಬೆಂಗಳೂರು ಮೂಲದ ಸಂಸ್ಥೆ ಪ್ರಿಪೇಯ್ಡ್ ಆಟೋ ಸೇವೆಯನ್ನು ನೀಡುತ್ತಿತ್ತು. ಅವಳಿ ನಗರದ ಜನತೆಗೆ ಕಡಿಮೆ ದರದಲ್ಲಿ ಆಟೋ ಸಂಚಾರಕ್ಕೆ ಅನುಕೂಲ ಕೂಡ ಮಾಡಿಕೊಡಲಾಗಿತ್ತು.
ಆದರೆ ಇದೀಗ ಆಟೋ ಸೇವೆ ಇಲ್ಲದ್ದರಿಂದ ಖಾಸಗಿ ಆಟೋಗಳು ಬೇಕಾಬಿಟ್ಟಿ ದರವನ್ನು ಪ್ರಯಾಣಿಕರಿಗೆ ಹೇರುತ್ತಿವೆ. ಪ್ರಯಾಣಿಕರಿಗೆ ಚೌಕಾಶಿ ಮೂಲಕ ಸಂಚಾರ ಮಾಡುವ ಆಟೋಗಳ ಚಾಲಕರು ಒಂದು ಕಿಮೀಗೆ 30 ರಿಂದ 50 ರೂ, ರಾತ್ರಿ ಹೊತ್ತು ದುಬಾರಿ ಬೆಲೆಯನ್ನು ನೀಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಪ್ರಿಪೇಯ್ಡ್ ಆಟೋ ಸೇವೆಯನ್ನು ಮತ್ತೆ ಆರಂಭ ಮಾಡಿದ್ರೆ ಜನರಿಗೆ ಅನುಕೂಲ ಆಗೊತ್ತೆ ಅಂತಾರೆ ಸ್ಥಳೀಯರು.
: ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಆರ್‌ಟಿಒ ಅಧಿಕಾರಿಗಳು ಕೂಡ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಆಟೋಗಳ ಚಾಲಕರು ಜನರಿಗೆ ಬಾಡಿಗೆ ವಿಚಾರವಾಗಿ ದಿನನಿತ್ಯ ಕಿರಿಕಿರಿ ನೀಡುವುದರ ಜೊತೆಗೆ ಬೇಕಾಬಿಟ್ಟಿ ಹಣ ಸುಲಿಗೆಗೆ ನಿಂತಿದ್ದಾರೆ. ಇದೆಲ್ಲವನ್ನು ಕಂಡು ಕಾಣದಂತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸ್ಥಗಿತಗೊಂಡಿರುವ ಪ್ರಿಪೇಯ್ಡ್ ಆಟೋ ಸೇವೆಯನ್ನು ಮತ್ತೆ ಆರಂಭಿಸಲು ಮುಂದಾಗುತ್ತಾರಾ? ಕಾದು ನೋಡಬೇಕಿದೆ….