ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕಕರ ಆಶಯದಂತೆ ನೂತನ ಸಂಸತ್ ಭವನದ ಹೊರಾಂಗಣವು ಸಂಪೂರ್ಣ ನೀಲಿ ಬಣ್ಣದಾಗಿರಬೇಕು ಮತ್ತು ಸಂಸತ್ತಿನ ಒಳಾಂಗಣವು ಬಸವಾದಿ ಶರಣರು ಸ್ಥಾಪಿಸಿದ್ದ ಜಗತ್ತಿನ ಪ್ರಪ್ರಥಮ ಸಂಸತ್ತು ಎಂದು ಹೆಮ್ಮೆಯಿಂದ ಕರೆಯಲ್ಪಡುವ ಅನುಭವ ಮಂಟಪವನ್ನು ನೆನಪಿಸುವಂತೆ ಶುಭ್ರ ಬಿಳಿ ಬಣ್ಣದಾಗಿರಬೇಕು ಎಂದು ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳು ಆಗ್ರಹಿಸಿವೆ.
ಈ ಕುರಿತು ಸೋಮವಾರದಂದು, ಶೋಷಿತ ಸಮುದಾಯಗಳ ನಾಯಕ ಮಲ್ಲೇಶ ಚೌಗಲೆ ಅವರ ನೇತೃತ್ವದಲ್ಲಿ, ಬಸವ ಭೀಮ ಸೇನೆ ಹಾಗೂ ನೀಲಿ ಸಂಸತ್ತಿಗಾಗಿ ಭೀಮ ಪಡೆ ಕಾರ್ಯಕರ್ತರಿಂದ ಬೆಳಗಾವಿ ಜಿಲ್ಲಾಡಳಿತದ ಮೂಲಕ ಲೋಕಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ನೀಲಿ ಸಂಸತ್ತಿಗಾಗಿ ಭೀಮ ಪಡೆಯ ನಾಯಕ ಮಲ್ಲೇಶ ಚೌಗಲೆ ಮಾತನಾಡಿ, ಕೇಂದ್ರ ಸರಕಾರ ಇತ್ತೀಚೆಗೆ ನೂತನ ಸಂಸತ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದೆ. ಆ ನೂತನ ಸಂಸತ್ ಭವನವು ಇಡಿ ದೇಶದ ಶೋಷಿತ ಸಮುದಾಯಗಳ ಭಾವನೆಯನ್ನು ಗೌರವಿಸುವ ಹಾಗೂ ಸಮಾನತೆಯ ಸಂಕೇತವಾಗಿ, ಡಾ.ಬಾಬಾಸಾಹೇಬ ಅಂಬೇಡ್ಕರರ ಆಶಯದಂತೆ ಸಂಪೂರ್ಣವಾಗಿ ನೀಲಿ ಬಣ್ಣದಾಗಿರಬೇಕು. ಸಂಸತ್ತಿನ ಒಳಭಾಗವು, ಜಗತ್ತಿನ ಪ್ರಪ್ರಥಮ ಸಂಸತ್ತು ಎಂದು ಹೆಮ್ಮೆಯಿಂದ ಕರೆಯಲ್ಪಡುವ ಬಸವಾದಿ ಶರಣರ ಅನುಭವ ಮಂಟಪವನ್ನು ನೆನಪಿಸುವಂತೆ ಶುಭ್ರ ಬಿಳಿ ಬಣ್ಣದಾಗಿರಬೇಕು ಎಂಬುದು ಈ ದೇಶದ ಬಹು ಸಂಖ್ಯಾತÀ ಶೋಷಿತ ಸಮುದಾಯಗಳ ಬಯಕೆಯಾಗಿದೆ ಎಂದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸಂವಿಧಾನವನ್ನು ಬದಲಿಸುವ ಹಾಗೂ ಡಾ.ಬಾಬಾಸಾಹೇಬ ಅಂಬೇಡ್ಕಕರರನ್ನು ಅಪಮಾನಿಸುವ ರೀತಿಯ ಘಟನೆಗಳು ಹೆಚ್ಚಾಗುತ್ತಿರುವದರಿಂದ ನೂತನ ಸಂಸತ್ ಭವನ ನಿರ್ಮಾಣದ ಬಗ್ಗೆ ನಮಗೆ ಸಂಶಯ ಮೂಡುತ್ತಿದೆ. ದೇಶದ ಸಂವಿಧಾನ ಹಾಗೂ ಸಂಸತ್ ಭವನವು ಇಡಿ ದೇಶದ ಜನರ ಭಾವನೆಗಳಿಗೆ ಸ್ಪಂಧಿಸುವಂತಿರಬೇಕು ಎಂಬ ದೃಷ್ಠಿಯಿಂದ ನೂತನ ಸಂಸತ್ ಭವನವು ನೀಲಿ ಬಣ್ಣದಾಗಿರಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಲೋಕಸಭಾಧ್ಯಕ್ಷರು ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಂಸತ್ತು ನೀಲಿ ಬಣ್ಣದಾಗಿರುವದರೊಂದಿಗೆ, ಸಂಸತ್ ಭವನದ ಆವರಣದಲ್ಲಿ, ಬುದ್ದ, ಬಸವ, ಅಂಬೇಡ್ಕರರು ಸೇರಿದಂತೆ ಈ ದೇಶದ ಮಹಾತ್ವರ ಪ್ರತಿಮೆಗಳ ಅನಾವರಣಕ್ಕೂ ಕ್ರಮ ಜರುಗಿಸಬೇಕು. ಈ ದಿಸೆಯಲ್ಲಿ ಹೆಚ್ಚಿನ ಹೋರಾಟಗಳಿಗೆ ಎಡೆ ಮಾಡಿ ಕೊಡದೇ, ತಕ್ಷಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೇ, ದೇಶವ್ಯಾಪಿ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆ.ಡಿ.ಮಂತ್ರೇಶಿ, ಎಂ.ಆರ್.ಕಲ್ಪತ್ರಿ, ಜೆ.ಆರ್. ಕುರಣೆ, ಶಿವಪುತ್ರ ಮೇತ್ರಿ, ಚೇತನ ಹುತಗಿ, ಆನಂದ ಕೋಲಕಾರ, ಸುಧೀರ ಚೌಗಲೆ, ಸಂತೋಷ ಹಲಗೇಕರ, ಅಮಿತ ಚೌಗಲೆ, ಅರ್ಜುನ ದೇಮಟ್ಟಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.