ಬೆಳಗಾವಿ ಲೋಕಸಭೆ ಬೈಎಲೆಕ್ಷನ್ಗೆ ಈವರೆಗೂ ಯಾವುದೇ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಿಲ್ಲ. ಈಗಾಗಲೇ ಐದಾರು ಜನರ ಹೆಸರು ಚಾಲ್ತಿಯಲ್ಲಿವೆ. ಆದರೆ ಯಾವುದೂ ಕೂಡ ಅಂತಿಮ ಆಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಗೋಕಾಕ್ನಲ್ಲಿ ರವಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ ಜಾರಕಿಹೊಳಿ ಬೆಂಗಳೂರಿನಲ್ಲಿ ನಿನ್ನೆ ನಡೆದ ಸಭೆಯಲ್ಲಿ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಈವರೆಗೂ ಯಾವುದೇ ಅಭ್ಯರ್ಥಿಗಳ ಹೆಸರನ್ನು ಶಿಪಾರಸು ಮಾಡಿಲ್ಲ. ಈಗಾಗಲೇ ಐದಾರು ಜನರ ಹೆಸರು ಕೇಳಿ ಬಂದಿದೆ. ಆದರೆ ಯಾವುದೂ ಅಂತಿಮವಲ್ಲ.ಇನ್ನು ವಯಕ್ತಿಕವಾಗಿ ನನಗೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ. ನಮಗೋಸ್ಕರ ಅಂತಾ ಅಲ್ಲ, ಪಕ್ಷಕ್ಕೆ ಅವಶ್ಯಕತೆ ಇದ್ದಾಗ ತೀರ್ಮಾನ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ಪ್ರಕಾಶ್ ಹುಕ್ಕೇರಿ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ ಕಾಂಗ್ರೆಸ್ನಿಂದ ಬೆಳಗಾವಿ ಲೋಕಸಭೆಗೆ ಪ್ರಕಾಶ್ ಹುಕ್ಕೇರಿ ಟಿಕೆಟ್ ಕೇಳಿದ್ದು ನಿಜ. ಆದರೆ ಅವರ ಹೆಸರನ್ನು ಶಿಫಾರಸು ಮಾಡಿಲ್ಲ. ನಾಳೆ ಹುಬ್ಬಳ್ಳಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಅಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ತಮ್ಮ ಪುತ್ರ-ಪುತ್ರಿಯ ರಾಜಕೀಯ ಕುರಿತು ಮಾತನಾಡಿ ರಾಜಕೀಯಕ್ಕೆ ಇನ್ನು ಅವರು ಬಂದಿಲ್ಲ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಮೊದಲು ಇದನ್ನು ಕಲಿಯಬೇಕು ಅವರು. ರಾಜಕೀಯ ಕಲಿಯುವುದು ಸುಲಭ ಎಂದರು. ಇನ್ನು ಕಾಂಗ್ರೆಸ್ನಲ್ಲಿಯೇ ಇರುತ್ತಾರಾ ಎಂದು ಇದೇ ವೇಳೆ ಮಾಧ್ಯಮಗಳು ಕೇಳಿದಕ್ಕೆ ಅವರು ಎಲ್ಲಿಗೆ ಹೋಗುತ್ತಾರೆ. ಇಲ್ಲಿಯೇ ಇರುತ್ತಾರೆ. ನಮ್ಮ ಬಾವುಟ ಅವರೇ ಒಯ್ಯಬೇಕಲ್ಲ. ಜ್ಯಾತ್ಯಾತೀತ ವಿಚಾರಗಳನ್ನು ತಿಳಿಸುತ್ತಿದ್ದೇವೆ. ಹೀಗಾಗಿ ಅವರು ಎಲ್ಲಿಗೂ ಹೋಗಲ್ಲ ಎಂದರು.
ಒಟ್ಟಾರೆ ಹುಬ್ಬಳ್ಳಿಯಲ್ಲಿ ಬೆಳಗಾವಿ ಲೋಕಸಭೆ ಬೈಎಲೆಕ್ಷನ್ಗೆ ಅಭ್ಯರ್ಥಿ ಫೈನಲ್ ಮಾಡುತ್ತೇವೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.