ಸಂಪುಟ ವಿಸ್ತರಣೆಯಲ್ಲಿ ನನ್ನ ಸ್ಥಾನ ಇದೆಯೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರಿನಿಂದ ನನಗೇನೂ ಕರೆ ಬಂದಿಲ್ಲ. ಬೇರೆ ಕೆಲಸಗಳ ನಿಮಿತ್ತ ಬೆಂಗಳೂರಿಗೆ ಹೊರಟಿದ್ದೇನೆ. ಮಂತ್ರಿಯಾದರೂ ಕೆಲಸ ಮಾಡುತ್ತೇನೆ, ಆಗದಿದ್ದರೂ ಶಾಸಕನಾಗಿ ಕೆಲಸ ಮುಂದುವರಿಸುತ್ತೇನೆ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಪ್ರತಿಕ್ರಿಯಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಹುಕ್ಕೇರಿ ಶಾಸಕ ಉಮೇಶ ಕತ್ತಿ ಮಾತನಾಡಿ, ಮಂತ್ರಿ ಸ್ಥಾನಕ್ಕಾಗಿ ನಾನು ಹಿಂದೆಯೂ ಲಾಭಿ ಮಾಡಿಲ್ಲ. ಈಗಲೂ ಮಾಡುವುದಿಲ್ಲ. ಆದರೆ ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ನನಗೆ ಇದೆ. ಶಾಸಕನಾಗಿ 27 ಕೆರೆ ತುಂಬಿಸುವ ಕೆಲಸ ಮಾಡಿಸುತ್ತಿದ್ದೇನೆ. ರಸ್ತೆ, ಮೂಲಸೌಕರ್ಯ ಅಭಿವೃದ್ಧಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳ ಮೂಲಕ ಆಗಬೇಕಾದ ಕೆಲಸಗಳತ್ತ ಲಕ್ಷ್ಯ ಕೊಟ್ಟಿದ್ದೇನೆ. ನಸೀಬ್‍ದಲ್ಲಿ ಇದ್ದರೆ ನನಗೆ ಮಂತ್ರಿ ಸ್ಥಾನ ತಪ್ಪಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಇನ್ನು ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಲಾರೆ ಎಂದದ್ದು ಶಾಸಕ ಬಸನಗೌಡ ಪಾಟೀಲ ಅವರ ವೈಯಕ್ತಿಕ ವಿಚಾರ. ಪಕ್ಷ ಒಂದು ವೇಳೆ ಮಂತ್ರಿ ಆಗು ಎಂದು ಆದೇಶ ನೀಡಿದರೆ ಆಗಲೇಬೇಕು. ಅದನ್ನು ಉಲ್ಲಂಘಿಸಲು ಆಗುವುದಿಲ್ಲ ಎಂದು ಶಾಸಕ ಉಮೇಶ ಕತ್ತಿ ಉತ್ತರಿಸಿದರು.
ಒಟ್ಟಿನಲ್ಲಿ ಸಂಪುಟ ವಿಸ್ತರಣೆಯಲ್ಲಿ ನನ್ನ ಸ್ಥಾನದ ಬಗ್ಗೆ ನನಗೆ ಮಾಹಿತಿಯಿಲ್ಲ. ನಸೀಬ್‍ದಲ್ಲಿ ಇದ್ದರೆ ಮಂತ್ರಿಯಾಗುತ್ತೇನೆ. ಇಲ್ಲದಿದ್ದರೆ ಶಾಸಕನಾಗಿಯೇ ಕೆಲಸ ಮಾಡುತ್ತೇನೆ ಎಂದು ಶಾಸಕ ಉಮೇಶ ಕತ್ತಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.