ಬಿಜೆಪಿ ಸರ್ಕಾರ ರಚನೆ ಆಗಲು ನನ್ನ ಪಾತ್ರ ಏನು ಎಂಬುದನ್ನು ವರಿಷ್ಠರು ಅತೃಪ್ತ ಶಾಸಕರಿಗೆ ಮನದಟ್ಟು ಮಾಡಿಕೊಡುತ್ತಾರೆ. ಇನ್ನು ಅನುಭವ ಕೊರತೆಯಿಂದ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಒಂದಿಷ್ಟು ಶಾಸಕರು ಮಾತನಾಡುತ್ತಿದ್ದಾರೆ ಎಂದು ನೂತನ ಸಚಿವ ಸಿ.ಪಿ.ಯೋಗೇಶ್ವರ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಟಾಂಗ್ ಕೊಟ್ಟಿದ್ದಾರೆ.
ಸೋತವರಿಗೆ ಮಂತ್ರಿ ಸ್ಥಾನ ವಿಚಾರವಾಗಿ ರೇಣುಕಾಚಾರ್ಯ ಸೇರಿದಂತೆ ಹಲವು ಬಿಜೆಪಿ ಶಾಸಕರು ಮಾಡಿರುವ ಆರೋಪ ಸಂಬಂಧ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯೋಗೇಶ್ವರ 14 ತಿಂಗಳ ಸಮ್ಮಿಶ್ರ ಸರ್ಕಾರದ ಆಡಳಿತದಿಂದ ರಾಜ್ಯದ ಭ್ರಮನಿರಸಗೊಂಡಿದ್ದರು. ಈ ವೇಳೆ ಜೆಡಿಎಸ್-ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ಆಡಳಿತದ ವೈಖರಿ, ಸಿದ್ದರಾಮಯ್ಯರ ಅಸಹಕಾರದಿಂದ ಬೇಸತ್ತು 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದರಿಂದ ನಮ್ಮ ಸರ್ಕಾರ ರಚನೆಯಾಗಿದೆ. ನಮ್ಮ ಎಲ್ಲಾ ಶಾಸಕರಿಗೂ ಈ ಎಲ್ಲಾ ವಿಚಾರ ಗೊತ್ತಿಲ್ಲ. ಅವರು ತಿಳಿದಂತಹ ವಿಷಯಗಳ ಇತಿಮಿತಿಯಲ್ಲಿ ಮಾತನಾಡುತ್ತಾರೆ. ಅನುಭವದ ಕೊರತೆಯಿಂದ ಆ ರೀತಿ ಮಾತನಾಡುತ್ತಿದ್ದಾರೆ. ಪಕ್ಷದ ವರಿಷ್ಠರು ಅವರಿಗೆ ತಾಖೀತು ಮಾತನಾಡುತ್ತಾರೆ. ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಏನು ಎಂಬುದನ್ನು ವರಿಷ್ಠರು ಅತೃಪ್ತ ಶಾಸಕರಿಗೆ ಮನದಟ್ಟು ಮಾಡಿಕೊಡುತ್ತಾರೆ ಎಂದು ಹೇಳಿದರು.
ಸರ್ಕಾರ ರಚನೆ ವೇಳೆ 9 ಕೋಟಿ ಸಾಲದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ ಅದು ನನ್ನ ವೈಯಕ್ತಿಕ ವಿಚಾರವಾಗಿದೆ. ರಮೇಶ ಜಾರಕಿಹೊಳಿ ಯಾವ ಅರ್ಥದಲ್ಲಿ ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಪಕ್ಷ ನನ್ನ ಅಳಿಲು ಸೇವೆ ಗುರುತಿಸಿ ನನಗೆ ಅವಕಾಶ ಕೊಟ್ಟಿದೆ.ಇನ್ನು ಶಾಸಕರ ಭಿನ್ನಮತಕ್ಕೆ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದರು.
ಯಡಿಯೂರಪ್ಪನವರಿಗೆ ಸಿಡಿ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಿ ಸಚಿವ ಸ್ಥಾನ ಪಡೆದಿದ್ದಿರಿ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಯೋಗೇಶ್ವರ ಕುಮಾರಸ್ವಾಮಿ ಮತ್ತು ಡಿಕೆಶಿ ನನ್ನ ಬಗ್ಗೆ ಮಾತನಾಡುತ್ತಾರೆ. ನಾನು ಆ ಬಗ್ಗೆ ವಿಚಾರ ಮಾಡೀದಿಲ್ಲ. ಇನ್ನು ಶಾಸಕರು ಅಸಮಾಧಾನವಾದಾಗ ನನ್ನ ಬಗ್ಗೆ ಪ್ರತಿಕ್ರಿಯೆ ನೀಡಿರಬಹುದು. ಆ ಬಗ್ಗೆ ನಾನು ಉತ್ತರಿಸಲ್ಲ. ಆದರೆ ನನ್ನ ಬಳಿ ಯಾವುದೇ ಸಿಡಿ ಇಲ್ಲ. ಇದು ಅಪ್ರಸ್ತುತ ವಿಚಾರ. ಏನೇ ಅಸಮಾಧಾನ ಇದ್ರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುತ್ತಾರೆ ಎಂದು ಹೇಳಿದರು.
ಇನ್ನು ಮೇಘಾ ಸಿಟಿ ಭ್ರಷ್ಟಾಚಾರ ವಿಚಾರದಲ್ಲಿ ಡಿಕೆಶಿಗೆ ಮತ್ತು ಕುಮಾರಸ್ವಾಮಿ ನನ್ನ ರಾಜಕೀಯ ವಿರೋಧಿಗಳು.ಹೀಗಾಗಿ ನನ್ನ ಮೇಲೆ ಕಳೆದ 25 ವರ್ಷಗಳಿಂದ ವಯಕ್ತಿಕ ಖಾಸಗಿ ವಿಚಾರಕ್ಕೆ ಹೋರಾಟ ಮಾಡಿಕೊಂಡು ಬಂದಿದ್ದಾರೆ. ನನ್ನ ಮೇಲೆ ಯಾವುದೇ ಗುರುತರವಾದ ಆರೋಪಗಳಿಲ್ಲ. 25 ವರ್ಷಗಳಿಂದ ನಾನು ಮತ್ತು ರಮೇಶ ಜಾರಕಿಹೊಳಿ ಒಳ್ಳೆಯ ಸ್ನೇಹಿತರು ಎಂದು ಇದೇ ವೇಳೆ ತಮ್ಮ ಸ್ನೇಹ ಸಂಬಂಧವನ್ನು ಬಿಚ್ಚಿಟ್ಟರು.
ಒಟ್ಟಾರೆ ಸರ್ಕಾರ ರಚನೆಯಲ್ಲಿ ನನ್ನ ಪಾತ್ರ ಏನೆಂಬುದು ವರಿಷ್ಠರಿಗೆ ಗೊತ್ತಿದೆ. ಅದನ್ನು ನಮ್ಮ ಅತೃಪ್ತ ಶಾಸಕರಿಗೆ ಹೈಕಮಾಂಡ್ ಮನದಟ್ಟು ಮಾಡಿಕೊಡುತ್ತೆ ಎಂದು ಬೆಳಗಾವಿಯಲ್ಲಿ ಸಚಿವ ಯೋಗೇಶ್ವರ ತಿರುಗೇಟು ಕೊಟ್ಟಿದ್ದು ಕಂಡು ಬಂತು.