Uncategorized

ದೇಶಿ ಕೊರೊನಾ ಲಸಿಕೆ ಬಗ್ಗೆ ಟೀಕೆ ಬೇಡ..ವಿಜ್ಞಾನಿಗಳಿಗೆ ಅಗೌರವ ಸರಿಯಲ್ಲ..ಡಾ.ಕೆ.ಸುಧಾಕರ್ ಅಸಮಾಧಾನ

Share

ದೇಶಿ ಕಂಪನಿಯಾದ ಭಾರತ್ ಬಯೋಟೆಕ್ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿದೆ. ಆದ್ರೆ, ಈ ಕುರಿತು ವಿನಾಕಾರಣ ಟೀಕೆ ಮಾಡುತ್ತಾ, ವಿಜ್ಞಾನಿಗಳಿಗೆ ಅಗೌರವ ತೋರಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಚಿವರು ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತದ ಕಂಪನಿ ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಿದೆ. ಭಾರತ್ ಬಯೋಟೆಕ್ ಬಹಳ ಹೆಸರುವಾಸಿ ಹಾಗೂ ನಂಬಿಕೆಗೆ ಅರ್ಹವಾದ ಕಂಪನಿಯಾಗಿದ್ದು, ಎಚ್1 ಎನ್1, ರೋಟಾವೈರಸ್, ರೇಬಿಸ್, ಚಿಕೂನ್ ಗುನ್ಯಾ, ಝೀಕಾ ಸೇರಿದಂತೆ 16 ರೋಗಗಳಿಗೆ ಲಸಿಕೆ ಆವಿಷ್ಕರಿಸಿದೆ. ಕಂಪನಿಯ ಸಂಸ್ಥಾಪಕ ಡಾ.ಕೃಷ್ಣ ಎಲ್ಲಾ ಅವರು ಸಾಧಾರಣ ಕುಟುಂಬದಿಂದ ಬಂದವರಾಗಿದ್ದು, ಯುನಿಸೆಫ್ ಸಹಯೋಗದಲ್ಲಿ 150 ಕ್ಕೂ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ 400 ಕೋಟಿ ಡೋಸ್ ಲಸಿಕೆಗಳನ್ನ ವಿತರಣೆ ಮಾಡಿದ್ದಾರೆ. ಕೋವ್ಯಾಕ್ಸಿನ್ʼನ 3 ನೇ ಹಂತದ ಕ್ಲಿನಿಕಲ್ ಟ್ರಯಲ್‍ನಲ್ಲಿ 24,000 ಮಂದಿ ಭಾಗವಹಿಸಿದ್ದು, ಈ ಬಗ್ಗೆ ಶೀಘ್ರವೇ ದತ್ತಾಂಶ ಲಭ್ಯವಾಗಲಿದೆ ಎಂದರು.

ಈ ಲಸಿಕೆಯ ಅಡ್ಡ ಪರಿಣಾಮ 15% ಗಿಂತಲೂ ಕಡಿಮೆಯಿದ್ದು, ಇದು ಬಹಳ ಸುರಕ್ಷಿತ. ನಾನು ಆರೋಗ್ಯ ಸಚಿವನಾಗಲ್ಲದೆ, ಸ್ವತಃ ಒಬ್ಬ ವೈದ್ಯಕೀಯ ವೃತ್ತಿಪರನಾಗಿ ಮನವಿ ಮಾಡಿಕೊಳ್ಳುತ್ತೇನೆ. ಯಾರೂ ಕೂಡ ಲಸಿಕೆಯ ಬಗ್ಗೆ ವಿನಾಕಾರಣ ಟೀಕಿಸಬಾರದು, ಈ ಮೂಲಕ ವಿಜ್ಞಾನಿಗಳ ಪರಿಶ್ರಮಕ್ಕೆ ಧಕ್ಕೆ ತರಬಾರದು ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Tags:

error: Content is protected !!