Protest

ದೆಹಲಿಯಲ್ಲಿ ರೈತರ ಪ್ರತಿಭಟನೆ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ

Share

ಕೇಂದ್ರದ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ಅವಿರತ ಹೋರಾಟ ನಡೆಸುತ್ತಿದ್ದಾರೆ. ಈ ನಡುವೆ ಸುಪ್ರೀಂಕೋರ್ಟ್‍ನಲ್ಲಿ ರೈತರು ದಾಖಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು, ಕೃಷಿ ಕಾಯ್ದೆಗಳಿಗೆ ನೀವು ತಡೆ ನೀಡುತ್ತೀರೋ, ಅಥವಾ ನಾವೇ ತಡೆ ನೀಡಬೇಕೋ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಕೃಷಿ ಕಾಯ್ದೆಗಳ ಒಳಿತು ಕೆಡಕುಗಳ ಬಗ್ಗೆ ಚರ್ಚಿಸಲು ಸಮಿತಿಯೊಂದನ್ನು ರಚಿಸುವಂತೆ ಆದೇಶಿಸಿದರು.

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳಿಗೆ ಸಂಬಂಧಿಸಿ ರೈತರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕೃಷಿ ಕಾಯ್ದೆಗಳಿಗೆ ತಡೆ ನೀಡಲು ಮುಂದಾಗಿದೆ. ಇದರಿಮದ ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.

ರೈತ ಪರ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ, ಕೃಷಿ ಕಾಯ್ದೆಗಳು ಒಳ್ಳೆಯವು ಎಂದು ಹೇಳುವ ಒಂದೇ ಒಂದು ಅರ್ಜಿ ಕೂಡ ಇದುವರೆಗೂ ದಾಖಲಾಗಿಲ್ಲ. ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೃದ್ಧರು, ಮಹಿಳೆಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಏನಾಗುತ್ತಿದೆ ದೇಶದಲ್ಲಿ? ಎಂದು ಕೇಂದ್ರ ಸರ್ಕಾರದ ಪ್ರತಿನಿಧಿಯನ್ನು ಪ್ರಶ್ನಿಸಿದರು.
ಸರ್ಕಾರ ಪ್ರತಿಭಟನೆ ನಿರತ ರೈತರೊಂದಿಗೆ ಮಾತುಕತೆ ನಡೆಸುತ್ತಿದೆಯೋ ಇಲ್ಲವೋ ಗೊತ್ತಿಲ್ಲ. ನಾವು ಕಠೋರ ಹೇಳಿಕೆಗಳನ್ನು ನೀಡಲು ಬಯಸುವುದಿಲ್ಲ. ಆದರೆ ಕೇಂದ್ರದ ಬಗ್ಗೆ ತೀವ್ರ ನಿರಾಶೆಯಾಗಿದೆ.

ನಮ್ಮ ಉದ್ದೇಶ ಸೌಹಾರ್ದಯುತ ಪರಿಹಾರ ರೂಪಿಸುವುದು. ಕಾನೂನುಗಳನ್ನು ಅಮಾನತುಗೊಳಿಸುವ ಸಲಹೆಗೆ ಏಕೆ ಪ್ರತಿಕ್ರಿಯೆ ಇಲ್ಲ? ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳ ಜಾರಿಯನ್ನು ಸ್ಥಗಿತಗೊಳಿಸಿದರೆ, ಚರ್ಚೆಗೆ ಕೂರುವಂತೆ ರೈತರಿಗೆ ನಾವು ಸೂಚಿಸುತ್ತೇವೆ ಎಂದು ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ ರಮಣ ಅವರನ್ನು ಒಳಗೊಂಡ ನ್ಯಾಯಪೀಠ ಅಭಿಪ್ರಾಯ ತಿಳಿಸಿತು.

Tags:

error: Content is protected !!