ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹಿಂದೆ ಶಾಂತಚಿತ್ತರಾಗಿದ್ದರು. ಸಮಾಧಾನದಿಂದ ಮಾತನಾಡುತ್ತಿದ್ದರು. ಈಗ ತಾಳ್ಮೆ ಕಳೆದುಕೊಂಡು ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ತಮ್ಮದೇ ಪಕ್ಷದ ನಾಯಕನ ವಿರುದ್ಧ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಮಾತನಾಡಿ, ಮೊದಲೆಲ್ಲ ಕುಮಾರಸ್ವಾಮಿ ಹೀಗೆ ಇರಲಿಲ್ಲ. ತುಂಬಾ ತಾಳ್ಮೆ ಇತ್ತು. ಕುಮಾರಸ್ವಾಮಿ ಅವರಷ್ಟು ಸಮಾಧಾನದ ವ್ಯಕ್ತಿ ಯಾರೂ ಇಲ್ಲ ಎಂದು ನಾವೆಲ್ಲ ಮಾತನಾಡುತ್ತಿದ್ದೆವು. ಆದರೆ, ಇತ್ತೀಚೆಗೆ ಕುಮಾರಸ್ವಾಮಿ ಅವರಲ್ಲಿದ್ದ ತಾಳ್ಮೆ ಕಾಣೆಯಾಗಿದೆ. ಅವರು ಈಗ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾರೆ. ಬೇಗ ಬೇಗ ಉತ್ತರಿಸಿ ಬಿಡುತ್ತಾರೆ. ಅವರು ಮೊದಲಿನಂತೆ ಇಲ್ಲ ಎಂದರು.
ಕುಮಾರಸ್ವಾಮಿ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಕೆಲವು ವಿಚಾರ ತಿಳಿಸುತ್ತೇನೆ. ತಾಳ್ಮೆ ಕಳೆದುಕೊಳ್ಳಬಾರದು ಎಂದು ಮನವಿ ಮಾಡುತ್ತೇನೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸಭಾಪತಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಏನಾಗುತ್ತದೋ ಎಂಬುದನ್ನು ಕಾದು ನೋಡುತ್ತೇನೆ ಎಂದು ಹೊರಟ್ಟಿ ಮಾರ್ಮಿಕವಾಗಿ ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗಳ ಬಗ್ಗೆ ಹೊರಟ್ಟಿ ಅವರ ಅಸಮಾಧಾನ ಮಂಗಳವಾರ ಪ್ರಕಟವಾಯಿತು.