ಹುಟ್ಟು ಹಬ್ಬದ ನಿಮಿತ್ಯವಾಗಿ ಸಮಾಜ ಸೇವೆಯಲ್ಲಿ ತೊಡಗಿರುವ ಯುವಕನೊರ್ವ ತನ್ನ 29ನೇ ಹುಟ್ಟು ಹಬ್ಬದ ನಿಮಿತ್ಯ ಸರ್ಕಾರಿ ಶಾಲೆಗೆ ಸುಣ್ಣ ಬಣ್ಣ ಮಾಡುವ ಮೂಲಕ ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ತೊರಿದ್ದಾನೆ.
ಗುಮ್ಮಟನಗರಿ ವಿಜಯಪುರ ಜಿಲ್ಲೆಯ ತಿಕೋಟಾಪಟ್ಟಣದ ಶ್ರೀರಾಮ ಕಾಲನಿ ನಿವಾಸಿ ಸುರೇಶ ಕೊಣ್ಣೂರ ಎಂಬ ಯುವಕ ತಮ್ಮದೇ ಕಾಲನಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 20 ಸಾವಿರ ವೆಚ್ಚದಲ್ಲಿ ಸುಣ್ಣ ಬಣ್ಣ ಮಾಡುವ ಮೂಲಕ ಆ ಶಾಲೆಯನ್ನು ಅಭಿವೃದ್ದಿಯತ್ತ ಸಾಗಿಸುತ್ತಿದ್ದಾನೆ. ಯುವಕನ ಈ ಸರ್ಕಾರಿ ಶಾಲೆಯ ಕಾಳಜಿಗೆ ಶಿಕ್ಷಕ ಸಮೂಹ ಅಭಿನಂದನೆ ಸಲ್ಲಿಸಿದೆ.
ನಿರಂತರವಾಗಿ ಸಮಾಜ ಸೇವೆಯ ಕಾರ್ಯ ಮಾಡುತ್ತಿರುವ ಈ ಯುವಕ ಈ ಶಾಲೆಯ ಮೂರು ಕೋಣೆಗಳ ಒಳ ಮತ್ತು ಹೊರ ಗೋಡೆಗಳ ಸುಣ್ಣ ಬಣ್ಣ ಹಾಗೂ ಬಾಗಿಲು ಕಿಟಕಿಗಳಿಗೆ ಬಣ್ಣ ಲೇಪನ ಮಾಡಿಸಿದ್ದಾನೆ. ಕಳೆದ ವರ್ಷ ಇದೇ ಶಾಲೆಯ 108 ಮಕ್ಕಳಿಗೆ ನೋಟಬುಕ್ ವಿತರಣೆ ಮಾಡಿದ್ದರು. ಕೊರೋನಾದಿಂದ ಜನ ತತ್ತರಿಸಿ ಹೋದಾಗ ತಮ್ಮ ಕಾಲನಿಯ ಜನರಿಗೆ ಮಾಸ್ಕ ವಿತರಣೆ ಮಾಡಿದ್ದಾರೆ. ಕಾಲನಿಯಲ್ಲಿ ಪಶು ಪಕ್ಷಿಗಳಿಗೆ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡಿ ಮೂಕ ಪಕ್ಕಿಗಳ ಕಾಳಜಿ ತೋರಿದ್ದಾರೆ. ಸುರೇಶರವರ ಸಮಾಜಕ್ಕಾಗಿ ಮಾಡುತ್ತಿರುವ ಸಮಾಜ ಸೇವೆ ಗಮನಿಸಿ ಬೆಂಗಳೂರಿನ ಕಲಾವಿದರ ರಕ್ಷಣಾ ವೇದಿಕೆಯಿಂದ “ಸಮಾಜ ಸೇವಾ ರತ್ನ ಪ್ರಶಸ್ತಿ” ಲಭಿಸಿದೆ. ಶಿವಮೊಗ್ಗ ಜಿಲ್ಲೆಯ ಕನಕಶ್ರೀ ಪತಂಜಲಿ ಚೇತನಾ ಸಂಸ್ಥೆಯಿಂದ “ಕನಕಶ್ರೀ ಚೇತನಾ ಪ್ರಶಸ್ತಿ” ಲಭಿಸಿದೆ.