ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ನಾನೇ ಕಾರಣ. ಆ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ. 2023ಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಝೇಂಡಾ ಹಾರಿಸಲೇಬೇಕು ಎಂದು ಪಣ ತೊಟ್ಟಿದ್ದೇವೆ. ಅದೇ ರೀತಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಚಲೋ ಗಣೇಶ್ ಬಾಗ್ ಹೆಸರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಸನ್ಮಾನ, ಸ್ನೇಹ ಭೋಜನಕೂಟದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಮ್ಮ ತಪ್ಪಿನಿಂದ ಬಿಜೆಪಿ ಸೋತಿದೆ. ಆದ್ರೆ ಆ ತಪನ್ನು 2023ರಲ್ಲಿ ಸರಿಪಡಿಸುತ್ತೇವೆ. ಬಿಜೆಪಿ ಝೇಂಡಾ ಹಾರಿಸಿಯೇ ಹಾರಿಸುತ್ತೇವೆ ಎಂದು ಹೇಳಿದರು. ಗ್ರಾಮೀಣ ಕ್ಷೇತ್ರದಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಯಾರಿಗೊ ಒಬ್ಬರಿಗೆ ಟಿಕೇಟ್ ಸಿಗುತ್ತೆ. ಹೀಗಾಗಿ ಎಲ್ಲರನ್ನೂ ಜ್ಯೋತಿಭಾ ದೇವರನ್ನು ಮುಟ್ಟಿಸಿ ಆಣೆ ಮಾಡಿಸಿ, ಚುನಾವಣೆಯಲ್ಲಿ ದುಡಿಯುವಂತೆ ಮಾಡುತ್ತೇವೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಶ್ಚಿಮ ಭಾಗ ಸುಳೇಭಾವಿ ಭಾಗದಲ್ಲಿ ಅತೀ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಆದ್ರೆ ಹಿರೇಬಾಗೇವಾಡಿ ಭಾಗದಲ್ಲಿ ಒಂದೆರಡು ಗ್ರಾಮ ಪಂಚಾಯತಿಗಳು ನಮ್ಮ ಕೈ ಬಿಟ್ಟಿವೆ. ಅಲ್ಲಿ ಬೇಕಂತಲೇ ನಾನೇ ಫ್ರೀ ಬಿಟ್ಟಿದ್ದೆ. ಮುಂದೆ ತಾಲೂಕಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗಳು ಪಕ್ಷದ ಚಿಹ್ನೆ ಆಧಾರದ ಮೇಲೆ ನಡೆಯುತ್ತವೆ. ಈ ಚುನಾವಣೆಗಳಲ್ಲಿ ಒಳ್ಳೆಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
: ಇನ್ನು ಜ.17ಕ್ಕೆ ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಬರುತ್ತಿದ್ದಾರೆ. ಕಾರ್ಯಕ್ರಮಕ್ಕೆ ಗ್ರಾಮೀಣ ಕ್ಷೇತ್ರದಿಂದಲೇ ಒಂದು ಲಕ್ಷ ಜನರು ಬರಬೇಕು. ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಒಟ್ಟು ನಾಲ್ಕು ಜನರು ಸೇರುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಇದೇ ವೇಳೆ ರಮೇಶ ಜಾರಕಿಹೊಳಿ ಮಾತನಾಡಿದರು.
ಒಟ್ಟಾರೆ 2023ಕ್ಕೆ ಗ್ರಾಮೀಣ ಕ್ಷೇತ್ರದಲ್ಲಿ ಕಮಲ ಅರಳಿಸಿಯೇ ತಿರುತ್ತೇವೆ. ಈ ಮೂಲಕ ನನ್ನಿಂದಾದ ತಪ್ಪನ್ನು ನಾನೇ ಪರಿಹರಿಸುತ್ತೇನೆ ಎಂದು ರಮೇಶ ಜಾರಕಿಹೊಳಿ ಗುಡುಗಿದ್ದಾರೆ.