Uncategorized

ಗಾಯಾಳು ಮಂಗನ ಸೆರೆ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರ:ಪ್ರಾಣಿ ದಯಾ ಸಂಘದ ಸಂತೋಷ ಧರೇಕರ್ ಹರಸಾಹಸ

Share

ಬೆಳಗಾವಿ ತಾಲೂಕಿನ ಬಸವನಕುಡಚಿಯಲ್ಲಿ ಗಾಯಗಳಿಂದ ನರಳುತ್ತಿದ್ದ ಮಂಗವೊಂದನ್ನು ಫೇಸ್ ಬುಕ್ ಫ್ರೆಂಡ್ಸ್ ಸರ್ಕಲ್‍ನ ಸಂತೋಷ ಧರೇಕರ್ ಹರಸಾಹಸದಿಂದ ರಕ್ಷಿಸಿ, ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಬಸವನಕುಡಚಿಯ ರೈತ ರಾಜುಕಾಕಾ ರಾಜಾಪುರೆ ಎಂಬುವವರ ಕರೆಗೆ ಸ್ಪಂದಿಸಿ ಬಸವನಕುಡಚಿಯ ಹೊರವಲಯದ ಹೊಲವೊಂದಕ್ಕೆ ಬೈಕ್‍ನಲ್ಲಿ ತೆರಳಿದ ಫೇಸ್ ಬುಕ್ ಫ್ರೆಂಡ್ಸ್ ಸರ್ಕಲ್‍ನ ಸಂತೋಷ ಧರೇಕರ್, ಜಮೀನಿನೊಂದರಲ್ಲಿ ಗಾಯಗೊಂಡು ಕುಳಿತಿದ್ದ ಮಂಗನನ್ನು ಬಂಧಿಸಲು ಪ್ರಯತ್ನಿಸಿದರು. ರೈತರು, ಸುತ್ತಮುತ್ತಲಿನ ನಿವಾಸಿಗಳು ಗಾಯಾಳು ಮಂಗನನ್ನು ನೋಡಲು ಕುತೂಹಲದಿಂದ ಜಮೀನಿನ ಬಳಿ ಸೇರಿದ್ದರು. ಬೆನ್ನು ಮತ್ತು ಕಾಲಿನಲ್ಲಿ ತೀವ್ರ ಗಾಯ ಮಾಡಿಕೊಂಡಿದ್ದ ಮಂಗ ಸುಲಭವಾಗಿ ಬಂಧಿಯಾಗಲು ಪೂರಕ ವಾತಾವರಣ ಇರಲಿಲ್ಲ. ಕೊನೆಗೆ ಧೈರ್ಯದಿಂದ ಮುಖದ ಮೇಲೆ ಅರಿವೆ ಹೊದಿಸಿ ಮಂಗನನ್ನು ಹಿಡಿದ ಸಂತೋಷ ಧರೇಕರ್ ಅವರ ಹೆಬ್ಬೆರಳನ್ನು ಮಂಗ ಕಚ್ಚಿ ಗಾಯಗೊಳಿಸಿತು. ಆದರೆ ಪಟ್ಟು ಬಿಡಿದ ಧರೇಕರ್, ಮಂಗನನ್ನು ಸೆರೆ ಹಿಡಿದು ಹೊಲದ ಒಂದು ಬದಿಯಲ್ಲಿ ಇರಿಸಿದರು. ಸುರಿವ ರಕ್ತದ ಬೆರಳಿನಿಂದ ರಕ್ತ ತೆಗೆದು ಬ್ಯಾಂಡೇಜ್ ಸುತ್ತಿಕೊಂಡು ಜಿಲ್ಲಾಸ್ಪತ್ರೆಗೆ ಧಾವಿಸಿ ಚಿಕಿತ್ಸೆ ಪಡೆದರು. ವೈದ್ಯರು ಅವರನ್ನು ಉಚಿತವಾಗಿ ಉಪಚರಿಸಿದರು. ನಂತರ ಬಸವನಕುಡಚಿಗೆ ತೆರಳಿ ಮಂಗನನ್ನು ಗಣೇಶ ರೋಖಡೆ ಅವರ ಅಂಬ್ಯೂಲೆನ್ಸ್‍ನಲ್ಲಿ ಅರಣ್ಯ ಇಲಾಖೆ ಕಚೇರಿಗೆ ಸಾಗಿಸಿ ಚಿಕಿತ್ಸೆ ನೀಡಲು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದರು.

ಈ ವೇಳೆ ವಲಯ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಮಗದುಮ್, ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ ಗೌಡರ, ಅರಣ್ಯ ರಕ್ಷಕ ಮಂಜುನಾಥ ಶೀಗೇಹಳ್ಳಿ,ಗಾಯಾಳು ಮಂಗನನ್ನು ವಶಕ್ಕೆ ಪಡೆದು ರಕ್ಷಿಸುವ ಜವಾಬ್ದಾರಿ ವಹಿಸಿಕೊಂಡರು.

Tags:

error: Content is protected !!