ಕಿರಾಣಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿಯು ಧಗಧಗನೆ ಹೊತ್ತಿ ಉರಿದು ಅಂಗಡಿಯ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಮಾಂಜರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಿನ ಹತ್ತಿರ ದುರ್ಘಟನೆ ನಡೆದಿದೆ. ಸುನಿಲ ರಾಮಚಂದ್ರ ಮಹಿಂದ ಇವರಿಗೆ ಸೇರಿದ ಅಂಗಡಿ ಇದಾಗಿದೆ. ಪ್ರಾರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಂತರ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾಗ ಫಲಪ್ರದವಾಗದೆ ಅಂಗಡಿಯು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಪರಿಣಾಮವಾಗಿ ಅಂಗಡಿಯಲ್ಲಿದ್ದ ಕಿರಾಣಿ ವಸ್ತುಗಳು, ಫರ್ನಿಚರ್ ಸೇರಿದಂತೆ ಎಲ್ಲ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳದಲ್ಲಿದ್ದ ಯುವಕರು ಅಕ್ಕ-ಪಕ್ಕದ ಅಂಗಡಿಗಳಲ್ಲಿ ಇದ್ದಂತಹ ವಸ್ತುಗಳನ್ನು ಹೊರ ತೆಗೆದು ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.