ರಾಜ್ಯ ಸಚಿವ ಸಂಪುಟಕ್ಕೆ ಇಂದು 7 ಸಚಿವರು ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನನಗೂ ಸ್ಥಾನ ಸಿಗಬಹುದು. ಕಾಲ ಕೂಡಿ ಬಂದಾಗ ಎಲ್ಲವೂ ಆಗುತ್ತದೆ. ಆಸೆ, ನಿರೀಕ್ಷೆ ನಮಗಿದ್ದರೂ, ಕೆಲವು ಸಮಸ್ಯೆಗಳಿಂದ ಎಲ್ಲರಿಗೂ ಸಚಿವ ಸ್ಥಾನ ಸಿಗದೇ ಇರುವ ಸಾಧ್ಯತೆ ಇದೆ. ಗಡಿನಾಡು ಅಥಣಿ ಅಭಿವೃದ್ಧಿ ನಮ್ಮ ಆದ್ಯತೆ ಎಂದು ಅಥಣಿ ಶಾಸಕ, ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷ ಮಹೇಶ ಕುಮಟಳ್ಳಿ ತಿಳಿಸಿದರು.
ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಅಥಣಿ ಶಾಸಕ, ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷ ಮಹೇಶ ಕುಮಟಳ್ಳಿ ಮಾತನಾಡಿ, 7 ಜನರು ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಸಂತಸವಾಗಿದೆ. ಕಾಲ ಕೂಡಿ ಬಂದಾಗ ಮಂತ್ರಿ ಆಗುತ್ತೇನೆ. ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಸಮಸ್ಯೆ ಇರಬಹುದು. ಮುಂದಿನ ಸಲ ಸ್ಥಾನ ನೀಡಬಹುದು. ಆದರೆ ಹಾಗೆಂದು ವರಿಷ್ಠರಿಗೆ, ಪಕ್ಷಕ್ಕೆ ಮುಜುಗರ ಆಗುವಂತಹ ಕೆಲಸ ಮಾಡುವುದಿಲ್ಲ ಎಂದರು.
ಇನ್ನು ಎಚ್.ವಿಶ್ವನಾಥ ಸೇರಿ ಹಲವರಿಗೆ ಮುಂದಿನ ಹಂತದಲ್ಲಿ ಸಚಿವ ಸ್ಥಾನ ಸಿಗಬಹುದು. ಗೆದ್ದು ಬಂದಿರುವ ಎಲ್ಲ 11 ಜನರನ್ನೂ ಪರಿಗಣಿಸಿದ್ದಾರೆ. ಯಾರನ್ನೂ ಕಡೆಗಣಿಸಿಲ್ಲ. ಎಚ್.ನಾಗೇಶ ಅವರನ್ನು ಕೈ ಬಿಡುವುದಿಲ್ಲ ಎಂಬ ಭರವಸೆ ಇದೆ. ಕೈ ಬಿಡಬಾರದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ ಎಂದು ಕುಮಟಳ್ಳಿ ತಿಳಿಸಿದರು.
ಇನ್ನು ಅಥಣಿ ಭಾಗದ ಒಬ್ಬರಿಗೆ ಡಿಸಿಎಂ ಸ್ಥಾನ ಸಿಕ್ಕಿದೆ. ಡಿಸಿಎಂ ಲಕ್ಷ್ಮಣ ಸವದಿ ಅವರ ಸಹಕಾರದಲ್ಲಿ ಅಥಣಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಗಡಿನಾಡು ಅಥಣಿ ಭಾಗದ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಬೇಸರ ಇಲ್ಲ. ಮುಂದಿನ ಸಲ ಸಿಕ್ಕೇ ಸಿಗುತ್ತದೆ. ಯಡಿಯೂರಪ್ಪ ಯಾರನ್ನೂ ನಿರ್ಲಕ್ಷಿಸಿಲ್ಲ ಎಂಬುದನ್ನು ನೋಡಿದ್ದೇನೆ. ನಂಬಿದ್ದೇನೆ ಎಂದು ಶಾಸಕ ಮಹೇಶ ಕುಮಟಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಆಸೆ, ನಿರೀಕ್ಷೆ ಇದ್ದರೂ ಸಚಿವ ಸ್ಥಾನ ಸಿಗದ್ದಕ್ಕೆ ಬೇಸರವಿಲ್ಲ. ಮುಂದಿನ ಸಲ ಸಿಗಬಹುದೆಂಬ ಭರವಸೆ ಇದೆ ಎಂದು ಶಾಸಕ ಮಹೇಶ ಕುಮಟಳ್ಳಿ ತಿಳಿಸಿದರು.