ಕಾಗವಾಡ ಮತಕ್ಷೇತ್ರದ 22 ಗ್ರಾಮಗಳಲ್ಲಿ ಜರುಗಿದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಎಲ್ಲ ಗ್ರಾಮಗಳಲ್ಲಿ ಬಿಜೆಪಿ ಪಕ್ಷದ ಸದಸ್ಯರು ಆಯ್ಕೆಗೊಂಡು ಆಡಳಿತ ಚುಕ್ಕಾಣಿ ಕೈಗೊಂಡಿದ್ದಾರೆ. ಕ್ಷೇತ್ರದ ಜನತೆ ಪಕ್ಷ ಮತ್ತು ಕಾರ್ಯಕರ್ತರ ಮೇಲೆ ನಂಬಿಕೆಯಿಟ್ಟು ಆಯ್ಕೆಮಾಡಿದ್ದರಿಂದ ಎಲ್ಲರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಜವಳಿ ಇಲಾಖೆ ಸಚಿವರಾದ ಶ್ರೀಮಂತ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರದಂದು ಕೆಂಪವಾಡ ಸಕ್ಕರೆ ಕಾರ್ಖಾನೆ ಸಭಾ ಭವನದಲ್ಲಿ ಕಾಗವಾಡ ಕ್ಷೇತ್ರದ ಬೇರೆ-ಬೇರೆ ಗ್ರಾಮಗಳಲ್ಲಿ ಜಯಭೇರಿ ಸಾಧಿಸಿದ ಗ್ರಾಪಂ ಸದಸ್ಯರು ಕಾರ್ಯಕರ್ತರ ಸಮ್ಮುಖದಲ್ಲಿ ಸಚಿವರನ್ನು ಭೇಟಿಯಾಗಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು. ಈ ವೇಳೆ ಸಚಿವ ಶ್ರೀಮಂತ ಪಾಟೀಲ ಮಾತನಾಡುವಾಗ ಕಾಗವಾಡ ಕ್ಷೇತ್ರದ ಮತದಾರರು ನನ್ನ ಮೇಲೆ ಮತ್ತು ರಾಜ್ಯದ ಮುಖ್ಯಮಂತ್ರಿಗಳ ದಿಟ್ಟ ಆಡಳಿತ ಮನಗಂಡು ಬಿಜೆಪಿ ಪಕ್ಷದ ಬೆಂಬಲಿತ ಗ್ರಾಪಂ ಸದಸ್ಯರನ್ನು ಬಹುಮತದಿಂದ ಆಯ್ಕೆಮಾಡಿದ್ದಾರೆ. ಈ ಎಲ್ಲರು ಗ್ರಾಮದ ಅಭಿವೃದ್ಧಿ ಬಹಿಸಿದ್ದಾರೆ. ಎಲ್ಲ ಸದಸ್ಯರು ಗ್ರಾಮದ ಜನರ ವಿಶ್ವಾಸ ಘಟ್ಟಿಗೊಳಿಸಲು ಪ್ರಾಮಾಣಿಕ ಸೇವೆ ಮಾಡಿರಿ. ನಾನು ಕಾಗವಾಡ ಕ್ಷೇತ್ರ ರಾಜ್ಯದಲ್ಲಿ ಒಂದು ಮಾದರಿ ಕ್ಷೇತ್ರವಾಗಿ ಮಾಡಲು ಪಣ ತೊಟ್ಟಿದ್ದೇನೆ. ಎಲ್ಲರು ಸಹಕರಿಸಿರಿ ಎಂದರು.
ಅಥಣಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಶೀತಲಗೌಡಾ ಪಾಟೀಲ ಮಾತನಾಡಿ ಉಗಾರ ಬುದ್ರುಕ ಗ್ರಾಮದ 26 ನೂತನ ಸದಸ್ಯರನ್ನು ಗ್ರಾಮದ ಜನತೆ ಆಯ್ಕೆಮಾಡಿದ್ದಾರೆ. ಸಚಿವ ಶ್ರೀಮಂತ ಪಾಟೀಲರು ಉಗಾರ ಗ್ರಾಮ ಮಾದರಿ ಗ್ರಾಮವಾಗಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಗ್ರಾಮದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿ ಸಹಕರಿಸಿರಿ ಎಂದರು.
ಈ ವೇಳೆ ಅಪ್ಪಾಸಾಹೇಬ ಚೌಗುಲೆ, ಅಣ್ಣಾಗೌಡಾ ಪಾಟೀಲ, ಸಾಗರ ಪೂಜಾರಿ, ಅಮೀನ್ ಶೇಖ್, ವಿನಾಯಕ ಶಿಂಧೆ, ಮನೋಜ ಕುಸನಾಳೆ, ವಿಜಯ ಶಿಂಧೆ, ಸಂತೋಷ ಐಹೊಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.