ಬೆಳಗಾವಿ: ಸಂಶೋಧನೆಗಳು ಜಾಗತಿಕ ಸಂವೇದನೆಯನ್ನು ಧ್ವನಿಸಬೇಕು. ಅವು ಸಾಂಪ್ರದಾಯಿಕ ಮಾದರಿಗಳನ್ನು ಅವಲಂಬಿಸದೆ ಬಹುಶಿಸ್ತೀಯ ಮಾದರಿಯಲ್ಲಿ ರೂಪುಗೊಳ್ಳಬೇಕು. ಈ ಕುರಿತು ಡಾ.ಶಂಬಾ ಅವರು ಕಳೆದ ಶತಮಾನದಲ್ಲಿ ಸಂಶೋಧನಾ ಮಾದರಿಗಳನ್ನು ಸಿದ್ದಪಡಿಸಿಕೊಟ್ಟಿದ್ದಾರೆ. ಅವರು ತೋರಿದ ಸಂಶೋಧನಾ ಮಾರ್ಗಗಳು ವಾಸ್ತವವಾಗಿ ಮುಂದಿನ ತರುಣ ಪೀಳಿಗೆಗೆ ಕೈಗನ್ನಡಿಗಳಾಗಿವೆ ಎಂದು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಹೆಚ್. ಎಂ.ಮಹೇಶ್ವರಯ್ಯ ಅವರು ತಿಳಿಸಿದರು.

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯು ಆಯೋಜಿಸಿದ್ದ ಕನ್ನಡ ಸಂಶೋಧಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಶಂಬಾ ಅವರ ಜನ್ಮದಿನವಾದ ಜನವರಿ 4ನ್ನು ಕನ್ನಡ ಸಂಶೋಧಕರ ದಿನವೆಂದು ಆಚರಿಸಲಾಗುತ್ತಿದೆ. ಅದಕ್ಕೆ ಕಾರಣ ಡಾ.ಶಂಬಾ ಅವರು ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆ ಎಂಬುದನ್ನು ಮರೆಯುವಂತಿಲ್ಲ ಎಂದರು.ಇದೇ ಸಂದರ್ಭದಲ್ಲಿ ಗಾಂಧಿ 150ನೇ ವರ್ಷಾಚರಣೆಯ ನಿಮಿತ್ತ ಪ್ರೊ.ಎಸ್. ಎಂ. ಗಂಗಾಧರಯ್ಯ ಹಾಗೂ ಡಾ.ಶೋಭಾ ನಾಯಕ ಅವರು ಸಂಪಾದಿಸಿದ ‘ಗಾಂಧಿತತ್ತ್ವಾನ್ವೇಷಣೆ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಗಾಂಧಿ ಮನುಕುಲದ ಆತ್ಮಪ್ರಜ್ಞೆಯ ಪ್ರತೀಕವೆಂದು ಅಭಿಪ್ರಾಯಪಟ್ಟರು. ಗಾಂಧಿಜಿಯವರನ್ನು ಕುರಿತು ಬಂದ ಈ ಪ್ರತಿಕ್ರಿಯೆಗಳು ಗಾಂಧಿಜಿ ಅವರ ಕುರಿತ ಮರು ಓದು ಮತ್ತು ಚಿಂತನೆಯ ಕ್ರಮವಾಗಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಎಂ.ರಾಮಚಂದ್ರಗೌಡ ಅವರು ಕನ್ನಡ ಸಂಶೋಧನೆಗಳು ತೀರ್ವಗೊಳ್ಳಬೇಕು ಹಾಗೂ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸುತ್ತಾ, ಅಲ್ಲದೇ ಗಾಂಧಿಜಿಯವರನ್ನು ಕುರಿತು ನಮ್ಮ ಸಂದರ್ಭದ ಪ್ರತಿಕ್ರಿಯೆಗಳನ್ನು ಈ ಪುಸ್ತಕವು ದಾಖಲಿಸಿದೆ. ಆ ಕಾರಣಕ್ಕಾಗಿ ಸಂಪಾದಕರನ್ನು ಅಭಿನಂದಿಸಬೇಕು.ಅಧ್ಯಯನ ಸಂಸ್ಥೆಯಲ್ಲಿ ಇಡೀ ವರ್ಷ ನಡೆಸಿದ ಗಾಂಧಿಜಿಯವರನ್ನು ಕುರಿತು ಚಿಂತನೆಗಳೆಲ್ಲವು ಪುಸ್ತಕದಲ್ಲಿ ದಾಖಲಾಗಿರುವುದು ಅಭಿನಂದನೀಯ ಸಂಗತಿ ಎಂದರು.ಪ್ರಸ್ತಾವಿಕ ಮಾತುಗಳನ್ನಾಡಿದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ಎಂ. ಗಂಗಾಧರಯ್ಯ ಅವರು ವಿಶ್ವವಿದ್ಯಾಲಯದಲ್ಲಿ ನಡೆದ ಸಂಶೋಧನಾ ಚಟುವಟಿಕೆಗಳು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಸಾಂಸ್ಕøತಿಕ ಅನನ್ಯತೆಯನ್ನು ಎತ್ತಿ ಹಿಡಿದಿವೆ ಎಂದು ತಿಳಿಸಿದರು. ಡಾ. ಮಹೇಶ ಗಾಜಪ್ಪನವರ ಅವರು ಅತಿಥಿಗಳನ್ನು ಪರಿಚಯಿಸಿದರು.ವಿಭಾಗದ ಅಧ್ಯಾಪಕರುಗಳಾದ ಡಾ.ಶೋಭಾ ನಾಯಕ, ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ಡಾ.ಪಿ. ನಾಗರಾಜ ಅವರು ಉಪಸ್ಥಿತರಿದ್ದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳು, ಭಾಗವಹಿಸಿದ್ದರು.