ಬೆಳಗಾವಿ ಚನ್ನಮ್ಮ ವೃತ್ತದ ಬಳಿ ಕಾಣೆಯಾಗಿದ್ದ ಕನ್ನಡ ಧ್ವಜ ನಾಪತ್ತೆ ಪ್ರಕರಣ ಭೇದಿಸಿದ ಖಡೇಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಡಿಸಿಪಿ ಡಾ.ವಿಕ್ರಮ ಆಮ್ಟೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಬೆಳಗಾವಿ ಚನ್ನಮ್ಮ ವೃತ್ತದ ಚನ್ನಮ್ಮ ಪ್ರತಿಮೆ ಬಳಿ ಹಾರಿಸಲಾಗಿದ್ದ ಕನ್ನಡ ಧ್ವಜ ಡಿಸೆಂಬರ್ 28ರಂದು ನಾಪತ್ತೆಯಾಗಿತ್ತು. ಇದರಿಂದ ನಗರದಲ್ಲಿ ವದಂತಿಗಳು ಹರಡಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕೂಡಲೇ ಕಾರ್ಯಪ್ರವೃತ್ತರಾದ ಖಡೇಬಜಾರ್ ಠಾಣೆ ಪೊಲೀಸರು ಸ್ಮಾರ್ಟ್ ಸಿಟಿ ಕ್ಯಾಮರಾ ದೃಶ್ಯಗಳನ್ನು ಬಳಸಿ ಆರೋಪಿಗಳ ಪತ್ತೆಗೆ ಮುಂದಾದರು. ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‍ಗೆ ಸಿಕ್ಕಿ ಕನ್ನಡ ಧ್ವಜ ಕಾಣೆಯಾಗಿದ್ದನ್ನು ಪತ್ತೆ ಹಚ್ಚಿದರು.
ಇದರಿಂದ ಬೆಳಗಾವಿ ನಗರದಲ್ಲಿ ತಲೆದೋರಿದ್ದ ಉದ್ವಿಗ್ನ ಸ್ಥಿತಿ ತಿಳಿಗೊಂಡಿತು. ಈ ಹಿನ್ನೆಲೆಯಲ್ಲಿ ಖಡೇಬಜಾರ್ ಠಾಣೆ ಸಿಪಿಐ ಧೀರಜ್ ಶಿಂಧೆ, ಹೆಡ್ ಕಾನ್ಸಟೆಬಲ್‍ಗಳಾದ ಬಸವಂತ ನಾಕಾಡಿ, ಡಿ.ಎಚ್.ಹತ್ತೀಕರ ಅವರಿಗೆ ಡಿಸಿಪಿ ಡಾ.ವಿಕ್ರಮ ಆಮ್ಟೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಒಟ್ಟಿನಲ್ಲಿ ಸಂಭವಿಸಬಹುದಾಗಿದ್ದ ಭಾಷಾ ಸಂಘರ್ಷವನ್ನು ಚಾಕಚಕ್ಯತೆಯಿಂದ ತಪ್ಪಿಸಿದ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಪ್ರಶಂಸೆ ವ್ಯಕ್ತವಾಯಿತು.