ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಹಾರಿಸಲಾಗಿರುವ ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸದಿದ್ದರೆ, ಬೆಳಗಾವಿಯ ಗಲ್ಲಿ ಗಲ್ಲಿಗಳಲ್ಲಿ ಭಗವಾ ಧ್ವಜಗಳು ಹಾರಾಡಲಿವೆ. ಜೊತೆಗೆ ಗಡಿ ವಿವಾದ ಘೋಷಣೆಗಳು ಮೊಳಗಲಿವೆ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ ಮುಖಂಡರು ಮತ್ತೊಮ್ಮೆ ಜಿಲ್ಲಾಡಳಿತಕ್ಕೆ ಎಚ್ಚರಿಕೆ ರವಾನಿಸಿದರು.
ಗಡಿ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಎಂಇಎಸ್ ಕಾರ್ಯಕರ್ತರ ಸ್ಮರಣಾರ್ಥ ಜನವರಿ 17ರಂದು ಆಚರಿಸುವ ಹುತಾತ್ಮ ದಿನಾಚರಣೆ ಕಾರ್ಯಕ್ರಮದ ರೂಪರೇಷೆಗಳ ಕುರಿತು ಚರ್ಚಿಸಲು ಬೆಳಗಾವಿ ಮರಾಠಾ ಮಂದಿರದಲ್ಲಿ ಎಂಇಎಸ್ ಅಧ್ಯಕ್ಷ ದೀಪಕ ದಳವಿ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಎಂಇಎಸ್ ಮುಖಂಡರು ಈ ಎಚ್ಚರಿಕೆ ರವಾನಿಸಿದರು. ಮಹಾನಗರ ಪಾಲಿಕೆ ಎದುರು ಹಾರಿಸಲಾದ ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವೇ ಕನ್ನಡ ಧ್ವಜದ ಬಳಿ ಭಗವಾ ಧ್ವಜ ಹಾರಿಸಲು ಅವಕಾಶ ನೀಡಬೇಕು ಎಂದು ಬೇಡಿಕೆ ಮಂಡಿಸಿದರು.
ಈ ವೇಳೆ ಎಂಇಎಸ್ ಅಧ್ಯಕ್ಷ ದೀಪಕ ದಳವಿ ಮಾತನಾಡಿ, ಕನ್ನಡ ಧ್ವಜ ವಿವಾದವನ್ನು ಹುಟ್ಟು ಹಾಕುವ ಮೂಲಕ ನಗರದ ಶಾಂತಿ ಭಂಗ ಮಾಡಲು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ಪಾಲಿಕೆ ಆವರಣದಲ್ಲಿ ಕನ್ನಡ ಧ್ವಜ ಹಾರಿಸಿದ್ದು ಕಾನೂನು ಬಾಹಿರವಾಗಿದೆ. ಇದೆಲ್ಲ ಗೊತ್ತಿದ್ದರೂ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಮರಾಠಾ ಜನರ ಆತಂಕ ಮತ್ತು ವೇದನೆ ಹೆಚ್ಚಿದೆ. ಕನ್ನಡ ಧ್ವಜ ಹಾರಿಸಲು ಜಿಲ್ಲಾಡಳಿತವೇ ಅವಕಾಶ ನೀಡಿದೆ. ಈ ಬಗ್ಗೆ ನಮ್ಮ ಅಳಲು ತೋಡಿಕೊಳ್ಳಲು ಕನ್ನಡ ಧ್ವಜ ತೆರವಿಗೆ ಆಗ್ರಹಿಸಲು ನಾವು ಮಂಗಳವಾರ ಜನವರಿ 6ರಂದು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಅವರು ಒಪ್ಪಲಿಲ್ಲ ಎಂದರೆ ನಮ್ಮ ನಿರ್ಧಾರ ಅಚಲವಾಗುತ್ತದೆ. ಜನವರಿ ಕೊನೆಯೊಳಗೆ ಗಲ್ಲಿ ಗಲ್ಲಿಗಳಲ್ಲಿ ಭಗವಾ ಧ್ವಜ ಹಾರಾಡಲಿವೆ. ಗಡಿ ವಿವಾದ ಘೋಷಣೆಗಳು ಮೊಳಗಲಿವೆ ಎಂದರು.
ಈ ವೇಳೆ ಮಾಜಿ ಮೇಯರ್ ಮಾಲೋಜಿರಾವ್ ಅಷ್ಟೇಕರ, ಮಾಜಿ ಶಾಸಕ ಮನೋಹರ ಕಿಣೇಕರ, ಪ್ರಕಾಶ ಮರಗಾಲೆ, ಬಿ.ಡಿ.ಮೋಹನಗೇಕರ, ರಣಜೀತ್ ಚವ್ಹಾಣ ಪಾಟೀಲ ಮತ್ತಿತರರು ಇದ್ದರು.