Bailahongala

ಐಐಟಿಗೆ ಪ್ರವೇಶ ಪಡೆದ ಗೋವನಕೊಪ್ಪದ ಗೌಡೇಶನಿಗೆ ಎಸ್‍ಸಿ ಹೊಂಗಲ ಪ್ರತಿಷ್ಠಾನದಿಂದ ಸತ್ಕಾರ

Share

ಬೈಲಹೊಂಗಲ: JEE ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ IIT (Indian Institute of Technology) ಕಾನ್ಪುರ್ ಗೆ ಪ್ರವೇಶ ಪಡೆದ ಗೋವನಕೊಪ್ಪ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಗೌಡೇಶ್ ಯಲ್ಲಪ್ಪ ಕಡಕೋಳ ಈತನನ್ನು ಗೋವನಕೊಪ್ಪದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನದಲ್ಲಿ ಸನ್ಮಾನಿಸಿ ಸತ್ಕರಿಸಲಾಯಿತು.

ಚಿಕ್ಕಂದಿನಿಂದಲೂ ಪ್ರತಿಭಾವಂತನಾದ ಗೌಡೇಶ್ ತನ್ನ ಕಠಿಣ ಮತ್ತು ಶಿಸ್ತಿನ ಪರಿಶ್ರಮದಿಂದ ಇಂದು ಉನ್ನತ ಮಟ್ಟದ ಸಾಧನೆ ಮಾಡಿ ಇಡೀ ದೇಶಕ್ಕೆ ಮಾದರಿಯಾಗಿದ್ದಾನೆ. ಸ್ಥಳೀಯ ಸರಕಾರಿ ಶಾಲೆಗಳಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನು ಪಡೆದು, ಹತ್ತನೆಯ ತರಗತಿಯಲ್ಲಿ 96.96% ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿ, ಡಾವಣಗೆರೆಯ ಸರ್ MV PU ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 93.33% ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾನೆ. ನಂತರ ತನ್ನ IIT ಕನಸನ್ನೇ ಬೆನ್ನಟ್ಟಿ JEE ಪರೀಕ್ಷೆಯಲ್ಲಿ 90 ನೇ ಸ್ಥಾನ ಗಳಿಸಿ ಅತ್ಯುನ್ನತ ಸಾಧನೆ ಮೆರೆದಿದ್ದಾನೆ ಎಂದು ಸ್ಥಳೀಯ ಸರಕಾರಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಸಿ ವೈ ತುಬಾಕಿ ಅವರು ತಮ್ಮ ವಿದ್ಯಾರ್ಥಿಯ ಸಾಧನೆಯನ್ನು ಕೊಂಡಾಡಿದರು.

ಸನ್ಮಾನ ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರೌಢ ಶಾಲಾ ಗುರುವೃಂದ ಗೌಡೇಶನ ಸಾಧನೆ ಮತ್ತು ಆತನ ಪರಿಶ್ರಮವನ್ನು ಕೊಂಡಾಡಿ, ದೃಢ ಸಂಕಲ್ಪ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಪ್ರತಿಷ್ಠಾನದ ಅಧ್ಯಕ್ಷೆ ಶ್ರೀಮತಿ ದೀಪಾ ಮಹಾಂತೇಶ ಹೊಂಗಲ ಮಾತನಾಡಿ ನಮ್ಮ ಊರಿನ ಪ್ರತಿಭಾವಂತ ವಿದ್ಯಾರ್ಥಿ ಮಾಡಿದ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಅನುಕರಣೀಯ ಮತ್ತು ಪ್ರೇರಣಾದಾಯಕ ಎಂದು ಹೇಳಿ ಗೌಡೇಶನ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿ, ಸ್ಥಳೀಯ ವಿದ್ಯಾರ್ಥಿಗಳಿಗೆ ಹೀಗೇ ನೀವೂ ಕೂಡ ಇನ್ನು ಹೆಚ್ಚು ಹೆಚ್ಚು ಸಾಧನೆಯ ಶಿಖರವನ್ನು ಏರಬೇಕು ಎಂದು ಹೇಳಿದರು.

ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಮಹಾಂತೇಶ ಹೊಂಗಲ ಮಾತನಾಡಿ Sಅ ಹೊಂಗಲ ಪ್ರತಿಷ್ಠಾನವು ಗೌಡೇಶನ ಸಾಧನೆಗೆ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ಒದಗಿಸಿ, ಆತನ ಬೆನ್ನೆಲುಬಾಗಿ ಇರುತ್ತದೆ ಎಂದು ಹೇಳಿದರು.

ಪ್ರತಿಷ್ಠಾನ ಶಿಕ್ಷಕಿ ಜ್ಯೋತಿ ಹೊಂಗಲ ಸ್ವಾಗತಿಸಿ, ನಿರೂಪಿಸಿದರು. ವಿದ್ಯಾರ್ಥಿನಿ ಅಶ್ವಿನಿ ಮೊಕಾಶಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಿರಣ ಕಡಕೋಳ, ಜ್ಯೋತಿ ಕಡಕೋಳ ಮತ್ತು ಸ್ಥಳೀಯ ಗ್ರಾಮಸ್ಥರು ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು

Tags:

error: Content is protected !!