ಇಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಏಳು ಜನರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಆದ್ರೆ ಇಂದು ಯಾರನ್ನೂ ಕೈ ಬಿಡುತ್ತಿಲ್ಲ. ಎಚ್.ನಾಗೇಶ್‍ರನ್ನು ಸಂಪುಟದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಚ್.ನಾಗೇಶ್‍ರನ್ನು ಸಿಎಂ ಬಿಎಸ್‍ವೈ ಸಂಪುಟದಿಂದ ಕೈ ಬಿಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ ಇಂದು ಯಾರನ್ನೂ ಕೂಡ ಡ್ರಾಪ್ ಮಾಡುತ್ತಿಲ್ಲ. ನಾಗೇಶ್‍ರನ್ನು ಸಂಪುಟದಿಂದ ಕೈ ಬೀಡುವ ಪ್ರಶ್ನೆಯೇ ಇಲ್ಲ. ನನಗೆ ತಿಳಿದಿರುವ ಮಾಹಿತಿ ಪ್ರಕಾರ ಯಾರನ್ನೂ ಬಿಡುವುದಿಲ್ಲ. ಎಚ್.ನಾಗೇಶ್ ಮೊನ್ನೆ ನನ್ನ ಜೊತೆ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ನಿನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲ. ಆತಂಕ ಪಡಬೇಡ ಎಂದು ಹೇಳಿದ್ದೇನೆ ಎಂದು ಹೇಳಿದರು.
ಸಿಎಂ ಬಿಎಸ್‍ವೈ ವಿರುದ್ಧ ಎಂಎಲ್‍ಸಿ ಎಚ್.ವಿಶ್ವನಾಥ್ ಅಸಮಾಧಾನ ಕುರಿತು ಮಾತನಾಡಿದ ರಮೇಶ ಜಾರಕಿಹೊಳಿ ಎಚ್.ವಿಶ್ವನಾಥ್ ಹಿರಿಯರು, ಅವರು ಮಾತನಾಡಿದ್ದನ್ನು ಆಶೀರ್ವಾದ ಎಂದು ತಿಳಿದುಕೊಂಡು ಬಿಟ್ಟಿ ಬಿಡೋಣ. ಕಾನೂನು ತೊಡಕು ಇರದೇ ಹೋಗಿದ್ರೆ ನೂರಕ್ಕೆ ನೂರು ಎಚ್.ವಿಶ್ವನಾಥ್ ಕೂಡ ಮಂತ್ರಿ ಆಗುತ್ತಿದ್ದರು. ಆದ್ರೆ ಕಾನೂನು ತೊಡಕು ಇರುವುದರಿಂದ ಅಡೆತಡೆಯಾಗಿದೆ ಎಂದರು.
ಇದೇ ವೇಳೆ ತಮ್ಮ ಮಿತ್ರಮಂಡಳಿ ಕುರಿತು ಮಾತನಾಡಿದ ರಮೇಶ ಜಾರಕಿಹೊಳಿ ನಮ್ಮ ಟೀಂನಲ್ಲಿ ಇನ್ನು ಐದು ಜನರಿಗೆ ಮಂತ್ರಿ ಸ್ಥಾನ ಸಿಗಬೇಕಿದೆ.
ಎಚ್.ವಿಶ್ವನಾಥ್, ಮುನಿರತ್ನ, ಮಹೇಶ ಕುಮಟಳ್ಳಿ, ಕಲಬುರ್ಗಿ ಭಾಗದ ಪ್ರಭಾವಿ ನಾಯಕ ನಮಗಿಂತ ಹೆಚ್ಚಿನ ಶಕ್ತಿ ಇರುವ ನಾಯಕ ಮಾಲೀಕಯ್ಯ ಗುತ್ತೇದಾರ್ ಅವರಿಗೂ ಸ್ಥಾನಮಾನ ಸಿಗಬೇಕಿದೆ. ಆದ್ರೆ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ಇನ್ನು ಎಪ್ರೀಲ್-ಮೇನಲ್ಲಿ ತಾಲೂಕಾ ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆ ಮುಗಿದ ನಂತರ ಹೆಚ್ಚಿನ ಜನರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಬೆಂಗಳೂರು ಮತ್ತು ಬೆಳಗಾವಿಗೆ ಸಂಪುಟ ಸಿಮೀತವಾಗಿದೆ ಎಂಬ ರೇಣುಕಾಚಾರ್ಯ ಆರೋಪ ಕುರಿತು ಪ್ರತಿಕ್ರಯಿಸಿದ ರಮೇಶ ಜಾರಕಿಹೊಳಿ ಅದು ನಿಜ, ಆದ್ರೆ ಸಾರ್ವತ್ರಿಕ ಚುನಾವಣೆ ನಂತರ ಆಗಿದ್ದರೆ ಅನಬಹುದಿತ್ತು. ಸಂದರ್ಭಕ್ಕೆ ಅನುಸಾರವಾಗಿ ಅದು ಆಗಿದೆ. ಅದು ಅನಿವಾರ್ಯ ಕೂಡ ಹೌದು. ಮುಂದಿನ ದಿನಗಳಲ್ಲಿ ಎಲ್ಲವನ್ನು ಮುಖ್ಯಮಂತ್ರಿಗಳು ಸರಿಪಡಿಸುತ್ತಾರೆ ಎಂದು ಹೇಳಿದರು. ಇನ್ನು ಉಮೇಶ ಕತ್ತಿ ಅವರಿಗೆ ಮೊದಲೇ ಮಂತ್ರಿ ಸ್ಥಾನ ಸಿಗಬೇಕಿತ್ತು. ಈಗ ಸಿಕ್ಕಿದೆ ಸಂತೋಷವಾಗಿದೆ ಎಂದರು.
ಒಟ್ಟಾರೆ ಇಂದು ಯಾರನ್ನೂ ಸಂಪುಟದಿಂದ ಡ್ರಾಪ್ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಮಿತ್ರ ಮಂಡಳಿಯ ಎಲ್ಲಾ ಸದಸ್ಯರಿಗೂ ಸ್ಥಾನಮಾನ ಸಿಗುವ ವಿಶ್ವಾಸವಿದೆ ಎಂದು ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.