ಅನ್ಯಾಯವಾದಾಗಲೆಲ್ಲ ಮಾತನಾಡಿದ್ದೇನೆ. ಆಗಲೂ ಮಾತನಾಡಿದ್ದೇನೆ, ಈಗಲೂ ಮಾತನಾಡುತ್ತೇನೆ. ನೀರಾವರಿ ಬಗ್ಗೆ ಮಾತನಾಡಿದ್ದೇನೆ, ಶಿಕ್ಷಣ, ಕೋವಿಡ್ ವಿಚಾರ ಹೀಗೆ ಯಾವ ವಿಷಯ ಮಾತನಾಡಬೇಕಿದೆಯೋ ಅದನ್ನು ಮಾತನಾಡಿದ್ದೇನೆ. ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಹೆದರುವ ಮಗ ನಾನಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಹೇಳಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಮಾತನಾಡಿ, ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆದಿದ್ದ ಸಭೆಯಲ್ಲಿ ನಾನು ಮಾತನಾಡಿದ್ದು ನಿಜ. ಅದರಲ್ಲಿ ತಪ್ಪೇನೂ ಇರಲಿಲ್ಲ. ಅಭಿವೃದ್ಧಿ ಬಗ್ಗೆ ನಾನು ಮಾತಾಡಿದೆ. ಈ ವಿಷಯ ಮಾತನಾಡಲು ನನಗೆ ಹಿಂಜರಿಕೆ ಇಲ್ಲ, ನಾನು ಹೆದರೋ ಮಗ ಅಲ್ಲ, ನನಗೆ ವಿಷಯ ಗೊತ್ತಿದೆ, ವಿಚಾರಗಳು ಗೊತ್ತಿದೆ, ಮಾತನಾಡುತ್ತೇನೆ.
ಮೊನ್ನೆ ಕೂಡ ಒಬ್ಬನೇ ಮಾತನಾಡಿದೆ. ಉಳಿದ ಶಾಸಕರು ಸುಮ್ಮನಿದ್ದರು. ಯಡಿಯೂರಪ್ಪ ಸಭೆಯಲ್ಲಿ ಒಬ್ಬರೇ ಶಾಸಕರು ಗಲಾಟೆ ಮಾಡಿದ್ದು ಅಂತಾ ಕಾರಜೋಳ ಹೇಳಿದರು. ಅವರು ಅತಿ ನಿಷ್ಠೆ ತೋರಿಸಲು ಹೋಗುತ್ತಿದ್ದಾರೆ. ಯಾರೂ ನನಗೆ ವಿರೋಧ ಮಾಡಲಿಲ್ಲ ಅಂದರೆ ಉಳಿದ ಶಾಸಕರು ನನ್ನನ್ನು ಬೆಂಬಲಿಸಿದರು ಅಂತ ಅರ್ಥ ಎಂದರು.
ಒಟ್ಟಿನಲ್ಲಿ ನನ್ನನ್ನು ಮಂತ್ರಿ ಮಾಡಿರಿ ಎಂದು ಯಡಿಯೂರಪ್ಪನವರ ಮನೆಗೆ ಎಂದೂ ಹೋಗಿಲ್ಲ. ಸರ್ಕಾರ ತಪ್ಪು ಮಾಡಿದಾಗ ನಾನು ಎಚ್ಚರಿಸಿದ್ದೇನೆ, ಅದು ಪಕ್ಷ ವಿರೋಧಿ ಕೆಲಸ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಸಮರ್ಥಿಸಿಕೊಂಡರು.