ಎಲ್ಲಿಯ ತನಕ ಅನ್ನದಾತನ ರಕ್ಷಣೆ ಮಾಡುತ್ತೇವೋ. ಕೃಷಿಯನ್ನು ಗೌರವಿಸುತ್ತೇವೆಯೋ ಅಲ್ಲಿಯ ತನಕ ಮಾತ್ರ ಸ್ವಾವಲಂಬಿ ಭಾರತ ಕಾಣಲು ಸಾಧ್ಯ ಎಂದು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ 14ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಇದೇ ವೇಳೆ ಕೃಷಿ ವಿಶ್ವವಿದ್ಯಾಲಯ ವತಿಯಿಂದ ಕೃಷಿ ವಿಸ್ತರಣಾ ಶಿಕ್ಷಣ ಘಟಕಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು 2021 ವರ್ಷ ಸಂಕ್ರಾಂತಿಯ ಸಮೀಪದಲ್ಲಿ ನಾವಿದ್ದೇವೆ. ಹೊಸ ಪರ್ವದಲ್ಲಿ ನಾವಿದ್ದೇವೆ.
ಒಂದೇ ಸೂರಿನಡಿ ಕಬ್ಬು ಮತ್ತು ಇತರೆ ಎಲ್ಲಾ ಬೆಳೆಯಲು ರೈತರಿಗೆ ಮಾರ್ಗದರ್ಶನ ನೀಡುವ ಸಂಸ್ಥೆ ಇದಾಗಬೇಕು ಎಂಬ ಉದ್ದೇಶದಿಂದ ಕೃಷಿ ವಿಸ್ತರಣಾ ಶಿಕ್ಷಣ ಘಟಕ ಆರಂಭಿಸಿದ್ದೇವೆ. ಅದೇ ರೀತಿ ಕೃಷಿ ವಿಶ್ವವಿದ್ಯಾಲಯದ ಕುಲಸಚಿವರು, ಒಂದೆರಡು ಸ್ಟಾಪ್ ಹಾಕಿದ್ರೆ ಏನೂ ಪ್ರಯೋಜನ ಆಗುವುದಿಲ್ಲ. ಹೆಚ್ಚು ಅನುಭವಿ ಸಿಬ್ಬಂದಿಗಳನ್ನು ನೇಮಿಸಿಕೊಂಡರೆ ರೈತರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಇದರಿಂದ ರೈತರಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.
ಇದೇ ವೇಳೆ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಮಾತನಾಡಿ ಆತ್ಮನಿರ್ಭರ ಭಾರತ ಪ್ರಧಾನಿ ಮೋದಿ ಅವರ ಸಂಕಲ್ಪದಂತೆ ಆತ್ಮನಿರ್ಭರ ಕೃಷಿ ಸ್ವಾವಲಂಬಿ ಕೃಷಿ ಮಾಡಲು ನಮ್ಮ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೇಂದ್ರ ಸರ್ಕಾರ ಮುಂದಡಿ ಇಡುತ್ತಿದೆ. ಸಕ್ಕರೆ ಸಂಸ್ಥೆ ಆವರಣದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಘಟಕ ಆರಂಭಿಸಲಾಗಿದೆ. ಇದರಿಂದ ರೈತರ ಜೊತೆ ಕೆಲಸ ಮಾಡಿ, ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಉಪಾಧ್ಯಕ್ಷ ಅಶೋಕ ಪಾಟೀಲ್, ಆಯುಕ್ತ ಅಕ್ರಂ ಪಾಷ, ವೆಂಕಟೇಶ್, ಅಜೀತ್ ದೇಸಾಯಿ, ರಮೇಶ ಪಟ್ಟಣ, ಕೃಷ್ಣಕಾಂತ ರೆಡ್ಡಿ, ಮಲ್ಲಿಕಾರ್ಜುನ ಹೆಗ್ಗಳಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.