ಯಡಿಯೂರಪ್ಪ ಒಬ್ಬರು ಸಿಎಂ ಇದ್ದಾರೆ, ಅವರ ಮಗ ಒಬ್ಬರು ಎಂಪಿ ಇದ್ದಾರೆ. ಇನ್ನುಳಿದಂತೆ ಅವರ ಅಳಿಯಾ ಸೇರಿದಂತೆ ಯಾರೂ ಕೂಡ ಅಧಿಕಾರದಲ್ಲಿ ಇಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿಎಂ ಯಡಿಯೂರಪ್ಪ ರಾಜೀನಾಮೆಗೆ ಯತ್ನಾಳ್ ಆಗ್ರಹ ಹಾಗೂ ಯಡಿಯೂರಪ್ಪ ಕುಟುಂಬದ ಮಕ್ಕಳು, ಅಳಿಯಾ ಸೇರಿದಂತೆ 50 ಜನರು ಅಧಿಕಾರದಲ್ಲಿದ್ದಾರೆ ಎಂಬ ಆರೋಪದ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಲಕ್ಷ್ಮಣ ಸವದಿ ಅವರ ಮಗ ಒಬ್ಬರು ಎಂಪಿ ಇದ್ದಾರೆ, ಅವರೊಬ್ಬರು ಸಿಎಂ ಇದ್ದಾರೆ. ಯಾವ ಅಳಿಯಾನೂ ಇಲ್ಲ, ಮತ್ತೊಬ್ಬರೂ ಇಲ್ಲ ಎಂದರು. ಇನ್ನು ಸಿಡಿ ಬಂದಾಗ ನೋಡೋಣ, ಅದರ ಬಗ್ಗೆ ಆಗಲೇ ಚರ್ಚೆ ಮಾಡೋಣ ಎಂದರು.
ಎಂಎಲ್‍ಸಿ ಎಚ್.ವಿಶ್ವನಾಥ್ ಬಾಂಬೇ ಡೇಸ್ ಪುಸ್ತಕ ಬರೆಯುತ್ತಿರುವ ಕುರಿತು ಇದೇ ವೇಳೆ ಮಾತನಾಡಿದ ಲಕ್ಷ್ಮಣ ಸವದಿ ಎಚ್.ವಿಶ್ವನಾಥ್ ಸಾಹಿತಿಗಳು, ಪುಸ್ತಕ ಬರೆಯಲಿ ನೋಡೋಣ. ಓದಿ ನಾವು ತಿಳಿದುಕೊಳ್ಳುತ್ತೇವೆ. ಇನ್ನು ಎಚ್.ವಿಶ್ವನಾಥ್ ಹಿರಿಯರು, ಮಂತ್ರಿಗಳಾಗಿ ಅಧಿಕಾರ ನಡೆಸಿದವರು. ನಮಗೆ ಎಲ್ಲರಿಗೂ ಮಾರ್ಗದರ್ಶನ ಮಾಡುವ ಬುದ್ಧಿಜೀವಿಗಳಿದ್ದಾರೆ. ಅವರ ಬಗ್ಗೆ ನಮಗೆ ಗೌರವವಿದೆ ಎಂದರು. ಮಂತ್ರಿ ಆಗಬೇಕು ಎಂಬ ಅಪೇಕ್ಷೆ ಅವರಿಗಿದೆ. ಆದ್ರೆ ಹೈಕೋರ್ಟ್‍ನಲ್ಲಿ ನಿರ್ಬಂಧ ಇರುವುದರಿಂದ ಅವರಿಗೆ ಸಚಿವ ಸ್ಥಾನ ಕೊಡಲು ಆಗಿಲ್ಲ. ಮುಂದಿನ ದಿನಗಳಲ್ಲಿ ಮೇಲ್ಮನವಿ ಸಲ್ಲಿಸಿ ಅವರಿಗೆ ಕೋರ್ಟ್ ಅವಕಾಶ ಕೊಟ್ಟರೆ ಮಂತ್ರಿ ಆಗುತ್ತಾರೆ ಎಂದು ಹೇಳಿದರು.
ಹೈಕಮಾಂಡ್‍ಗೆ ಕೆಲ ಶಾಸಕರು ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಣ ಸವದಿ ನಮ್ಮಲ್ಲಿ ಇರುವ ಸಣ್ಣಪುಟ್ಟ ವ್ಯತ್ಯಾಸಗಳ ಬಗ್ಗೆ ಮನೆ ಯಜಮಾನರಿಗೆ ದೂರು ಕೊಡುವುದರಲ್ಲಿ ತಪ್ಪಿಲ್ಲ. ಏನೇ ದೂರು ಅಸಮಾಧಾನ ಇದ್ದರೂ ಸಾರ್ವಜನಿಕವಾಗಿ ವ್ಯಕ್ತಪಡಿಸಬೇಡಿ ರಾಷ್ಟ್ರೀಯ ನಾಯಕರಾದ ನಮ್ಮ ಮನೆ ಯಜಮಾನರಿಗೆ ತಿಳಿಸಿ ಎಂದು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ಇನ್ನು ಸಂಪುಟ ಪುನರಾಚನೆ ಆಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಯಿಸಿದ ಲಕ್ಷ್ಮಣ ಸವದಿ ಪುನರಾಚನೆ ಈಗ ಆಗಿಲ್ಲ. ಖಾಲಿ ಇರುವ ಸ್ಥಾನಗಳನ್ನು ತುಂಬಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ನಾಯಕರು ಹಾಗೂ ಮುಖ್ಯಮಂತ್ರಿಗಳು ಕೂಡಿ ಚರ್ಚಿಸಿ ಕಾಲ ಬಂದಾಗ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಯಡಿಯೂರಪ್ಪ ಕೃತಜ್ಞತೆ ಇಲ್ಲದ ನಾಯಕ ಎಂದು ಎಚ್.ವಿಶ್ವನಾಥ ಆರೋಪಕ್ಕೆ ಮಂತ್ರಿ ಸ್ಥಾನ ಸಿಗದೇ ಇರುವ ಸಂದರ್ಭದಲ್ಲಿ ಸ್ವಲ್ಪ ಆಕ್ರೋಶವಾಗಿ ಮಾತುಗಳು ಬಂದಿರುತ್ತವೆ. ಅದರ ಬಗ್ಗೆ ನಾವ್ಯಾರು ಅಪಾರ್ಥ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ಹೇಳಿದರು. ಇನ್ನು ಯತ್ನಾಳ್ ಕೂಡ ಪಕ್ಷದ ಹಳೆಯ ಕಾರ್ಯಕರ್ತರು, ಅವರಿಗೂ ಕೂಡ ಕೆಲ ಅಸಮಾಧಾನಗಳು ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದರು.
ಒಟ್ಟಾರೆ ಒಂದು ಕುಟುಂಬ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಇರುವುದು ಸಹಜ. ಆದ್ರೆ ಎಲ್ಲವನ್ನೂ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಬಗೆಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.