ಬಹು ನಿರೀಕ್ಷಿತ ಸ್ವದೇಶಿ ಕೊರಾನಾ ವ್ಯಾಕ್ಸಿನ್ ನೀಡುವ ಕೇಂದ್ರಕ್ಕೆ ಅಥಣಿ ಪಟ್ಟಣದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಚಾಲನೆ ನೀಡಿದರು.
ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ನೂರು ಕೊರೊನಾ ವಾರಿಯರ್ಸ್‍ಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ಡಿ ದರ್ಜೆ ಕೊರೊನಾ ವಾರಿಯರ್ಸ್‍ಗಳಿಗೆ ಮೊದಲ ಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಶನಿವಾರ ಅಥಣಿ ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.
ಅಥಣಿ ಸಮುದಾಯದ ಆಸ್ಪತ್ರೆಯಲ್ಲಿ ಮೊದಲಿಗೆ ಮಂಜುನಾಥ ಬಸವರಾಜ ನೂಲಿ ಎಂಬುವರು ಕೋ ವ್ಯಾಕ್ಸಿನ್ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು ತಾಲೂಕಿನಲ್ಲಿ ನಾನು ಮೊದಲು ಕೋವಿಡ್ ವ್ಯಾಕ್ಸೀನ್ ತೆಗೆದುಕೊಂಡಿರುವುದು ತುಂಬಾ ಸಂತೋಷವಾಗಿದೆ. ಹಾಗೂ ಯಾವುದೇ ಭಯವಿಲ್ಲದೆ ತೆಗೆದುಕೊಂಡೆ ಇದರಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವ ಚುಚ್ಚು ಮದ್ದಿನ ರೀತಿಯಲ್ಲಿ ಇರೋದ್ರಿಂದ ಭಯ ಮುಕ್ತವಾಗಿ ಪಡೆಯಿರಿ ಎಂದು ಕರೆ ನೀಡಿದರು.
ಇದೇ ವೇಳೆ ಡಿಸಿ ಮಹಾಂತೇಶ ಹಿರೇಮಠ ಅವರು ಮಾತನಾಡಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 13 ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಒಂದು ಕೇಂದ್ರದಲ್ಲಿ 100 ಲಸಿಕೆ ನೀಡಲಾಗುತ್ತದೆ ಅದರಲ್ಲೂ ಮೊದಲಿಗೆ ಡಿ ದರ್ಜೆ ಕೊರೊನಾ ವಾರಿಯರ್ಸ್‍ಗಳಿಗೆ ಕೋ ವ್ಯಾಕ್ಸಿನ್ ನೀಡಲಾಗುತ್ತಿದೆ ಎಂದು ಹೇಳಿದರು.
ಇದೆ ವೇಳೆ ಅಥಣಿ ತಾಲೂಕು ವೈದ್ಯಾಧಿಕಾರಿ ಡಾ.ಬಸವರಾಜ ಕಾಗೆ ಮಾತನಾಡಿ, ಆರೋಗ್ಯ ಇಲಾಖೆಯ ಮಾರ್ಗ ಸೂಚಿ ಅನುಸಾರ ಲಸಿಕೆ ನೀಡುತ್ತಿದ್ದೇವೆ. ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಮೊದಲ ಹಂತವಾಗಿ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ಹೇಳಿದರು. ಇನ್ನು ನಮ್ಮ ಸಿಬ್ಬಂದಿ ಭಯ ಬಿಟ್ಟು ಲಸಿಕೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ದರ್ಶನ್ ಸೇರಿದಂತೆ ಹಲವು ಅಧಿಕಾರಿಗಳು, ಕೊರೊನಾ ವಾರಿಯರ್ಸ ಉಪಸ್ಥಿತರಿದ್ದರು.