ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗುವಲ್ಲಿ ವಿಳಂಬವಾಗಿದೆ. ಆದರೆ ಸಿಎಂ ನನ್ನ ಮೇಲೆ ವಿಶ್ವಾಸ ಇಟ್ಟು ಸಚಿವ ಸ್ಥಾನ ನೀಡಿದ್ದಾರೆ. ಉತ್ತರ ಕರ್ನಾಟಕದ .ಜತೆಗೆ ಅಖಂಡ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುವೆ ಎಂದು ನೂತನ ಸಚಿವ ಉಮೇಶ ಕತ್ತಿ ಹೇಳಿದರು.
ಬೆಳಗಾವಿ ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ನೂತನ ಸಚಿವ ಉಮೇಶ ಕತ್ತಿ ಶುಕ್ರವಾರ ಭೇಟಿ ನೀಡಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ನಂತರ ಸಚಿವ ಉಮೇಶ ಕತ್ತಿ ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪನರ ನೇತೃತ್ವದ ಸರಕಾರ ರಚನೆಯಾದಾಗಲೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಬೇರೆ ಬೇರೆ ಜಿಲ್ಲೆ ಹಾಗೂ ಎಲ್ಲ ಸಮುದಾಯವನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಬೇಕೆನ್ನುವ ಉದ್ದೇಶವನ್ನು ಸಿಎಂ ಯಡಿಯೂರಪ್ಪ ಇಟ್ಟುಕೊಂಡಿದ್ದರು. ನನಗೆ ಸಚಿವ ಸ್ಥಾನ ಕೊಡುವಲ್ಲಿ ವಿಳಂಬ ಮಾಡಿದರೂ ನಾನು ನನ್ನ ಕ್ಷೇತ್ರದ ಕೆಲಸ ತೆಗೆದುಕೊಂಡು ಹೋದ ಸಂದರ್ಭದಲ್ಲಿ ಕೂಡಲೇ ಮಾಡಿಕೊಟ್ಟಿದ್ದಾರೆ. ಆದರೂ ಈಗ ನನಗೆ ಸಚಿವ ಸ್ಥಾನ ನೀಡಿದ್ದಾರೆ ಎಂದರು. ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಸರಕಾರದಲ್ಲಿ ನನಗೆ ನೀಡುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನನ್ನ ಜಿಲ್ಲೆ ಹಾಗೂ ರಾಜ್ಯಕ್ಕೆ ಉತ್ತಮ ಹೆಸರು ತಂದು ಕೊಡುವ ಕೆಲಸ ಮಾಡುತ್ತೇನೆ. ಶ್ರೀಗಳ ಆಶೀರ್ವಾದ ನನ್ನ ಮೇಲೆ ಸದಾ ಇರಬೇಕೆಂದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮಾತನಾಡಿ, ನನ್ನ ಸಹೋದರ ಉಮೇಶ ಕತ್ತಿ ಅವರಿಗೆ ಸಚಿವ ಸ್ಥಾನ ಸಿಗುವಲ್ಲಿ ತಡವಾದರೂ ವಿಶೇಷವಾಗಿ ಸಿಕ್ಕಿದೆ. ಶ್ರೀಗಳ ಆಶೀರ್ವಾದ, ಗೋಮಾತೆಯ ಪೂಜೆ, ಬಿಜೆಪಿ ಕೇಂದ್ರ, ನಾಯಕರು, ಕಾರ್ಯಕರ್ತರು, ಸಂಘ ಪರಿವಾರದವರ ಆಶೀರ್ವಾದಿಂದ ಸಚಿವ ಸ್ಥಾನ ದೊರೆತಿದೆ. ಬರುವ ದಿನಮಾನಗಳಲ್ಲಿ ಪಕ್ಷದ ವರಿಷ್ಠರು ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಉತ್ತರ ಕರ್ನಾಟಕದ ಹೆಮ್ಮೆಯ ನಾಯಕ, ಈ ಭಾಗಕ್ಕೆ ಅನ್ಯಾಯವಾದಾಗ ಗಟ್ಟಿಯಾದ ಧ್ವನಿ ಎತ್ತುವ ನಾಯಕರು ಉಮೇಶ ಕತ್ತಿ ಅವರು. ಬೆಳಗಾವಿ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ಬಂದಿವೆ. ಸುವರ್ಣ ವಿಧಾನಸೌಧ ನಿರಂತರ ಚಟುವಟಿಕೆ ಇರಬೇಕು. ನೂತನ ಸಚಿವ ಉಮೇಶ ಕತ್ತಿ ಅವರಿಂದಲೇ ಹೆಚ್ಚು ಹೆಚ್ಚು ಕೆಲಸ ಈ ಕಟ್ಟಡದಲ್ಲಿ ನಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಬಿಜೆಪಿ ಬಾಲ ಭವನದ ನಿರ್ದೇಶಕಿ ಲೀನಾ ಟೋಪಣ್ಣವರ, ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ, ಅಶೋಕ ಪಾಟೀಲ, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ವೀರುಪಾಕ್ಷಯ್ಯ ನೀರಲಗಿಮಠ, ಬುಡಾ ಇಂಜನಿಯರ್ ಮಹಾಂತೇಶ ಹಿರೇಮಠ ಮುಖಂಡರಾದ ಚನ್ನಪ್ಪ ಗಜಬೂರು, ಸೋಮನಾಥ ಬರಕನಟ್ಟಿ, ತಮನಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.